ನಾಪತ್ತೆಯಾದ 7 ಮಂದಿ ಮೀನುಗಾರರನ್ನು ಪತ್ತೆ ಹಚ್ಚಲು ಆಗ್ರಹಿಸಿ ;ಉಡುಪಿಯಲ್ಲಿ ಬೃಹತ್ ಪ್ರತಿಭಟನೆ

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರು ಕಣ್ಮರೆಯಾಗಿ 23 ದಿನಗಳು ಕಳೆದಿವೆ.ನಾಪತ್ತೆಯಾಗಿರುವ 7 ಮಂದಿ  ಮೀನುಗಾರರ ಶೀಘ್ರ ಪತ್ತೆಗೆ ಆಗ್ರಹಿಸಿ ಸಾವಿರಾರು ಮೀನುಗಾರರು ಕಡಲಿಗಿಳಿಯದೆ ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ಅಂಗವಾಗಿ ಮಲ್ಪೆಯಿಂದ ಕಾಲ್ನಡಿಗೆಯ ಜಾಥಾಕ್ಕೆ ಮೊಗವೀರ ಮುಖಂಡ ಜಿ .ಶಂಕರ್ ಚಾಲನೆ ನೀಡಿದರು. ಮಲ್ಪೆ ಬಂದರಿನಿಂದ ಹೊರಟ ಸಾವಿರಾರು ಮೀನುಗಾರರು ಕರಾವಳಿ ಬೈಪಾಸ್‌ನಲ್ಲಿ ತಿರುಗಿ ಮೇಲ್ಸೇತುವೆ ಮೂಲಕ ಅಂಬಲಪಾಡಿ ಬೈಪಾಸ್‌ಗೆ ಬಂದು ರಾಸ್ತಾ ರೋಕೋ ನಡೆಸಿ ಆಕ್ರೋಶ ಹೊರ ಹಾಕಿದರು. ಈ ಪ್ರತಿಭಟನೆಯಲ್ಲಿ ಮೀನುಗಾರರ ವಿವಿಧ ಸಂಘಟನೆಗಳು, ಸಾವಿರಾರು ಮೀನುಗಾರ ಮಹಿಳೆಯರು, ಮಲ್ಪೆ ಪರಿಸರದ ಅಂಗಡಿಗಳ ಮಾಲೀಕರು, ರಿಕ್ಷಾ ,ಟ್ಯಾಕ್ಸಿ , ಟೆಂಪೊ ಚಾಲಕ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇವರೊಂದಿಗೆ ಸಂಸದೆ ಶೋಭಾ ಶೋಭಾ ಕರಂದ್ಲಾಜೆಯೂ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯ 30 ಸಾವಿರಕ್ಕೂ ಅಧಿಕ ಮೀನುಗಾರರು ಪಾಲ್ಗೊಂಡಿದ್ದರು.

ಧರಣಿಗೆ ಸಾಥ್ ಕೊಟ್ಟ ಸಚಿವರು, ಶಾಸಕರು ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ. ಶಂಕರ್, ಆರ್.ಕೆ.ಗೋಪಾಲ್, ಯು.ಆರ್.ಸಭಾಪತಿ, ಲಾಲಾಜಿ ಮೆಂಡನ್, ಉದಯ ಕುಮಾರ್, ಶೆಟ್ಟಿ, ಯಶ್ಪಾಲ್ ಸುವರ್ಣ ಮತ್ತಿತರರು ಸಾಥ್ ನೀಡಿದ್ದಾರೆ.