ಉಡುಪಿ: ಮೀನುಗಾರರು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಲ್ಲ. ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಮೀನುಗಾರ ಮುಖಂಡ ಜಿ. ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸುವಂತೆ ಆಗ್ರಹಿಸಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಬೈಪಾಸ್ ಬಳಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಸರಕಾರಗಳು ರೈತರ ಬಗ್ಗೆ ತೋರಿಸುವ ಕಾಳಜಿಯ ಎಳ್ಳಷ್ಟು ಮೀನುಗಾರರ ಮೇಲೆ ತೋರಿಸುತ್ತಿಲ್ಲ.
ನಮ್ಮನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಕಣ್ಮರೆಯಾಗಿರುವ ಮೀನುಗಾರರನ್ನು ಕೂಡಲೇ ಹುಡುಕಿಕೊಡುವ ಕೆಲಸ ಮಾಡಿ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮೀನುಗಾರರು ನಾಪತ್ತೆಯಾಗಿ 23 ಕಳೆದಿವೆ. ಆದರೆ ಚಿಕ್ಕ ಸುಳಿವು ಸಿಕ್ಕಿಲ್ಲ. ನಮ್ಮ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ನಾವು ಯಾವುದೇ ಪಕ್ಷದ ಗುಲಾಮರಲ್ಲ. ಮೀನುಗಾರರ ರಕ್ಷಣೆಗೆ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿ. ಪ್ರಧಾನಿ ಮೋದಿ ಅವರ ಜೊತೆ ಮಾತನಾಡಿ ಮೀನುಗಾರರ ರಕ್ಷಣೆ ಮಾಡಲು ಶೋಧ ಕಾರ್ಯವನ್ನು ಇನಷ್ಟು ಚುರುಕುಗೊಳಿಸಿ ಎಂದು ಅವರು ಜನಪ್ರತಿನಿಧಿಗಳಿಗೆ ಒತ್ತಾಯಿಸಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಳು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ಕರೆ ತರುವ ಹೊಣೆಹೊರಬೇಕು. ಈ ನಿಟ್ಟಿನಲ್ಲಿ ಮೂರು ಜಿಲ್ಲೆಯ ಮೀನುಗಾರರು ಒಟ್ಟಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಒಂದು ವೇಳೆ ನಾವು ತಾಳ್ಮೆ ಕಳೆದುಕೊಂಡರೆ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಎಚ್ಚರಿಸಿದರು.
ಮೀನುಗಾರ ಮುಖಂಡ ಯಶ್ ಪಾಲ್ ಸುವರ್ಣ ಮಾತನಾಡಿ, ನಾವು ಸಾಲಮನ್ನಾ ಮಾಡಿ, ಬಡ್ಡಿ ಮನ್ನಾ ಮಾಡಿಯೆಂದು ಬೀದಿಗಿಳಿದಿಲ್ಲ. ನಮ್ಮ ಬದುಕಿನೊಂದಿಗೆ ಚೆಲ್ಲಾಟ ಆಡಬೇಡಿ. ನಮ್ಮನ್ನು ಒಳ್ಳೆಯ ರೀತಿಯಲ್ಲಿ ಪರಿಗಣಿಸಿ. ಮೀನುಗಾರರ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ಮಾಡಬೇಡಿ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.
ನಾವು ಕಡಲ ಮಧ್ಯೆ ಮಾಡುವ ಹೋರಾಟವನ್ನು ರಸ್ತೆಯಲ್ಲಿ ಮಾಡಿದರೆ ಯಾವ ಸರಕಾರಕ್ಕೂ ಉಳಿಗಾಲವಿಲ್ಲ ಎಂದು ಮೀನುಗಾರ ಮುಖಂಡ ರವಿರಾಜ್ ಸುವರ್ಣ ಎಚ್ಚರಿಕೆ ನೀಡಿದರು.
ಸಂಸದೆ ಶೋಭಾ ಕರದ್ಲಾಂಜೆ ಮಾತನಾಡಿ, ಏಳು ಮೀನುಗಾರರ ನಾಪತ್ತೆಗೆ ಸಂಬಂಧಿಸಿ ಕೂಡಲೇ ಪ್ರಧಾನಿ ಮೋದಿ ಅವರ ಬಳಿಗೆ ನಿಯೋಗವನ್ನು ಕರೆದುಕೊಂಡು ಹೋಗಿ ಮೀನುಗಾರರ ಪತ್ತೆಗೆ ಉನ್ನತ ಮಟ್ಟದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ನೌಕಾಪಡೆ, ಕೋಸ್ಟಲ್ ಗಾರ್ಡ್ ಹಾಗೂ ಹೆಲಿಕಾಪ್ಟರ್ ಮೂಲಕ ನಿರಂತರ ಹುಡುಕಾಟ ಮಾಡಲಾಗುತ್ತಿದೆ. ಅಲ್ಲದೆ, ಕಾರ್ಯಾಚರಣೆಗೆ ಮಹಾರಾಷ್ಟ್ರ, ಗೋವಾ ಸರ್ಕಾರದ ಸಹಕಾರವನ್ನು ಪಡೆಯಲಾಗುವುದು ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಕುಮುಟ ಶಾಸಕ ದಿನಕರ ಶೆಟ್ಟಿ, ಸುರತ್ಕಲ್ ಶಾಸಕ ಭರತ್ ಶೆಟ್ಟಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಸಭಾಪತಿ ಹಾಗೂ ವಿವಿಧ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.
ಮೀನುಗಾರರು ಶ್ರೇಷ್ಠ: ಸಚಿವೆ ಜಯಮಾಲ
ಕಡಲ ಮಧ್ಯೆ ನೀರಿನೊಂದಿಗೆ ಸಂಘರ್ಷ ಮಾಡಿ ಬದುಕು ಕಟ್ಟಿಕೊಳ್ಳುವ ಮೀನುಗಾರರ ಬಗ್ಗೆ ಯಾರು ಕೂಡ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ ಎಂದು ಉಸ್ತುವಾರಿ ಸಚಿವೆ ಜಯಮಾಲ ಹೇಳಿದರು.
ಮೀನುಗಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಮೀನುಗಾರರು ನಾಪತ್ತೆಯಾದ ದಿನದಿಂದ ಇಂದಿನವರೆಗೂ ರಾಜ್ಯ ಸರ್ಕಾರ ಕಾರ್ಯಾಚರಣೆಯಿಂದ ಚೂರು ಹಿಂದೆ ಸರಿದಿಲ್ಲ. ಮಹಾರಾಷ್ಟ್ರ, ಗೋವಾ ಹಾಗೂ ಕೇಂದ್ರ ಸರ್ಕಾರಗಳ ಜತೆ ಸೇರಿ ಶೋಧ ಕಾರ್ಯ ಮಾಡಲಾಗುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮೀನುಗಾರರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.