ಮಲ್ಪೆ: ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನ ನೌಕರರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
ಪಶ್ಚಿಮ ಬಂಗಾಲ ಮೂಲದ ಪ್ರಸ್ತುತ ಕೇರಳ ರಾಜ್ಯದ ಇಡುಕಿ ಜಿಲ್ಲೆಯ ಮರಾಯು ಗ್ರಾಮದ ಆಲಿಫ್ ಇಸ್ಲಾಮ್(21) ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಈ ಹಿಂದೆ 2025ರ ಡಿ.21ರಂದು ಗುಜರಾತ್ ರಾಜ್ಯದ ಹೀರೇಂದ್ರ ಕುಮಾರ್ (34) ಹಾಗೂ 2025ರ ನ.21ರಂದು ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಬಂಧಿಸಲಾಗಿತ್ತು.
ಇವರೆಲ್ಲ ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿ ಯನ್ನು ವಾಟ್ಸಾಪ್ ಹಾಗೂ ಫೇಸ್ ಬುಕ್ ಮೂಲಕ ಪಾಕಿಸ್ತಾನಕ್ಕೆ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದ ತನಿಖೆ ಮಂದುವರಿ ಸಿದ ಪೊಲೀಸರು, ಐದನೇ ಆರೋಪಿ ಆಲಿಫ್ ಇಸ್ಲಾಮ್‌ನನ್ನು ಫೆ.16ರಂದು ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಫೆ.2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತ ಈ ಪ್ರಕರಣದ ಐದನೇ ಆರೋಪಿಯಾಗಿದ್ದು, ಆರೋಪಿಗಳು ಗೌಪ್ಯ ಮಾಹಿತಿ ರವಾನಿಸಲು ಬಳಸಿಕೊಂಡಿರುವ ಫೇಸ್ ಬುಕ್ ಪೇಜ್‌ನ ಮಾಲಕನ ಬಂಧನ ಬಾಕಿ ಇದೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆಂದು ತಿಳಿದುಬಂದಿದೆ.
ಬಂಧಿತ ಆರೋಪಿ ಆಲಿಫ್ ಇಸ್ಲಾಮ್ ಬಾಂಗ್ಲಾದೇಶದ ಪ್ರಜೆ ಎಂಬ ಅನುಮಾನ ಇದ್ದು, ಈ ವಿಚಾರ ದೃಢಪಟ್ಟ ನಂತರ ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
















