ಮಲ್ಪೆ ಸೇಂಟ್ ಮೇರಿಸ್ ದ್ವೀಪದಲ್ಲಿ ಗುಂಡು ಪಾರ್ಟಿ: ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ಸಹಿತ ಏಳು ಮಂದಿ ಪೊಲೀಸ್ ವಶ

ಉಡುಪಿ: ಇಲ್ಲಿನ ಮಲ್ಪೆ ಸೇಂಟ್  ಮೇರಿಸ್ ದ್ವೀಪದಲ್ಲಿ ರಾತ್ರಿ ಗುಂಡು ಪಾರ್ಟಿ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ಸಹಿತ ಏಳು ಮಂದಿಯನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಪೆ ಕಡಲತೀರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಸೇಂಟ್ ಮೇರಿಸ್ ದ್ವೀಪದಲ್ಲಿ ಶನಿವಾರ ರಾತ್ರಿ 9.30ಕ್ಕೆ ದೀಪದ ಬೆಳಕು ಉರಿಯುತ್ತಿರುವುದು ಕಂಡುಬಂದಿದ್ದು, ಆ ದೀಪ ಒಂದೇ ಕಡೆ ಸುಮಾರು ರಾತ್ರಿ 11.30 ರ ವರೆಗೂ ಗೋಚರಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಮಲ್ಪೆ ಪೊಲೀಸ್ ಠಾಣೆ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಮಾಹಿತಿಯನ್ನು‌ ಆಧಾರಿಸಿ ಸ್ಥಳಕ್ಕೆ ಭೇಟಿ ನೀಡಿದ ಮಲ್ಪೆ ಠಾಣೆ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ಮಲ್ಪೆ ಪ್ರವಾಸಿ ಬೋಟ್ ಗಳ ಜೆಟ್ಟಿಯಲ್ಲಿ ಸುದೇಶ್ ಶೆಟ್ಟಿಗೆ ಸೇರಿದ್ದು ಎನ್ನಲಾದ ಕಾರನ್ನು ಪತ್ತೆ ಮಾಡಿದ್ದಾರೆ. ಅದರಂತೆ ಸುದೇಶ್ ಶೆಟ್ಟಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಸುದೇಶ್ ತಾನು ಸೇಂಟ್ ಮೇರಿಸ್ ದ್ವೀಪದಲ್ಲಿದ್ದು, ತನ್ನೊಂದಿಗೆ ನಾಲ್ಕೈದು ಮಂದಿ ಇದ್ದಾರೆ ಎಂಬ ವಿಷಯವನ್ನು ಒಪ್ಪಿಕೊಂಡಿದ್ದಾರೆ.
ತಕ್ಷಣ ವಾಪಸು ಬರುವಂತೆ ಪೊಲೀಸರು ಸೂಚಿಸಿದಾಗ ಈಗ ಅಲೆ ಅಬ್ಬರ ಜೋರಾಗಿದ್ದು, ಅದು ಕಡಿಮೆ ಆದಾಗ ಬರುತ್ತೇವೆಂದು ಸುದೇಶ್ ತಿಳಿಸಿದ್ದಾರೆ.  ಆದರೆ ಮಧ್ಯರಾತ್ರಿ  1 ಗಂಟೆಯವರೆಗೂ ವಾಪಸ್ ಬರದಿರುವುದನ್ನು ಗಮನಿಸಿದ ಪೊಲೀಸರು, ಕರಾವಳಿ ಕಾವಲು ಪಡೆಯ ಗಸ್ತು ಬೋಟ್ ನಲ್ಲಿ ದ್ವೀಪಕ್ಕೆ ತೆರಳಿದ್ದಾರೆ. ಅಲ್ಲಿ ಕುಡಿದು ಮಲಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.
ಈ ಬಗ್ಗೆ ನಗರಸಭೆಯ ವಡಬಾಂಡೇಶ್ವರ ವಾರ್ಡ್ ಸದಸ್ಯ ಯೋಗೀಶ್ ಸಾಲಿಯಾನ್ ನೀಡಿರುವ ದೂರಿನಂತೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬೀಚ್ ಅಭಿವೃದ್ಧಿ ಸಮಿತಿ ನಿರ್ವಾಹಕನೇ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಆತನ ಮೇಲೆ ಯಾವ ರೀತಿಯ ಕ್ರಮ ಜರುಗಿಸಬೇಕೆಂಬುವುದರ ಕುರಿತು ಪೊಲೀಸರು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ  ಜಿಲ್ಲಾಧಿಕಾರಿ ಜಿ.‌ಜಗದೀಶ್ ಅವರೊಂದಿಗೆ ಚರ್ಚೆ ನಡೆಸಲಿದ್ದು, ಅವರಿಗೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಒಪ್ಪಿಸಲಿದ್ದಾರೆ.
ಸೇಂಟ್ ಮೇರಿಸ್ ದ್ವೀಪಕ್ಕೆ ರಾತ್ರಿ 7ರಿಂದ ಬೆಳಿಗ್ಗೆ 7 ರವರೆಗೆ ಪ್ರವಾಸ ಕೈಗೊಳ್ಳುವುದು ಹಾಗೂ ಅಲ್ಲಿ ವಾಸ್ತವ್ಯ ಮಾಡುವುದಕ್ಕೆ ಜಿಲ್ಲಾಡಳಿತ ನಿಷೇಧಹೇರಿದೆ. ಅಲ್ಲದೆ ಈಗ ದೇಶದಾದ್ಯಂತ ಕೊರೊನಾ ಭೀತಿ ಇರುವುದರಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಸಹಿತ ಏಳು ಮಂದಿ ಕಾನೂನುಗಳನ್ನು ಗಾಳಿ ತೂರಿ ದ್ವೀಪದಲ್ಲಿ ಕಂಠಪೂರ್ತಿ ಕುಡಿದು ಮೋಜುಮಸ್ತಿಯಲ್ಲಿ ತೊಡಗಿದ್ದರು. ಜಿಲ್ಲಾಧಿಕಾರಿ ಈ ಏಳುಮಂದಿಯ ಮೇಲೆ ಯಾವ ಕ್ರಮ ಜರುಗಿಸುತ್ತಾರೆ ಎಂದು ಕಾದುನೋಡಬೇಕಾಗಿದೆ.