ಕಾಂಗ್ರೆಸ್ ಗೆ ದೇಶದ ರಕ್ಷಣೆಗಿಂತ ಸ್ವಾರ್ಥ ಸಾಧನೆ ಹೆಚ್ಚು: ಸಂಸದೆ ಮೀನಾಕ್ಷಿ ಲೇಖಿ ಆರೋಪ

ಉಡುಪಿ: ಭಾರತೀಯ ಸೇನೆ ಇರುವುದು ದೇಶದ ರಕ್ಷಣೆಗೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕೆಲವರು (ಕಾಂಗ್ರೆಸ್ ನವರು) ಭಯೋತ್ಪಾದಕರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ ಸಾಕ್ಷಿ ಕೇಳುತ್ತಾರೆ. ಅವರಿಗೆ ದೇಶದ ರಕ್ಷಣೆಗಿಂತ ಹೆಚ್ಚಾಗಿ ಸ್ವಾರ್ಥ ಸಾಧನೆಯೇ ಹೆಚ್ಚಾಗಿದೆ ಎಂದು ಸಂಸದೆ ಮೀನಾಕ್ಷಿ ಲೇಖಿ ಟೀಕಿಸಿದರು.
ನಮೋ ಭಾರತ್ ವತಿಯಿಂದ ಭಾನುವಾರ ಮಲ್ಪೆ ಬೀಚ್‌ನಲ್ಲಿ ಹಮ್ಮಿಕೊಂಡಿದ್ದ ಪಾಂಚಜನ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಗೆ ದೇಶದ ರಕ್ಷಣೆ ಮುಖವಲ್ಲ. ದೇಶವನ್ನು ಮತ್ತೆ ಲೂಟಿ ಹೊಡೆದು, ಕುಟುಂಬದ ರಕ್ಷಣೆ ಮಾಡಿಕೊಳ್ಳಬೇಕಿದೆ. ಹಾಗಾಗಿ ಅವರು ಮಹಾಘಟ್ ಬಂಧನ್‌ ರಚಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಅವರು ಭಯೋತ್ಪಾದನೆಗೆ ಭಾರತ ಬಗ್ಗುವುದಿಲ್ಲ ಎಂಬುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಭಯೋತ್ಪಾದನೆಯನ್ನು ಭಾರತ ಎಂದೂ ಸಹಿಸುವುದಿಲ್ಲ. ಅದಕ್ಕೆ ಭಾರತ ಇತ್ತೀಚೆಗೆ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸ್ಪಷ್ಟ ಉದಾಹರಣೆ ಎಂದರು.
ಇಡೀ ಭಾರತವೇ ಮೋದಿಯಂತಹ ನಾಯಕತ್ವಕ್ಕೆ ಹಲವಾರು ವರ್ಷಗಳಿಂದ ಕಾತುರದಿಂದ ಕಾಯುತಿತ್ತು. ದೇಶದ ಜನರ ವರದಾನ ಎಂಬತೆ ಮೋದಿ ಅವರು ದೇಶದ ಪ್ರಧಾನಿಯಾಗಿದ್ದಾರೆ. ಭವಿಷ್ಯದ ಸದೃಢ, ಶಕ್ತಿಯುತ ಭಾರತಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ದೇಶದ ಜನರ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಮುಂಬೈದಾಳಿ, ಸಂಸತ್ ಮೇಲೆ ದಾಳಿ ನಡೆದಿದೆ. ಆದರೂ ಅಂದಿನ ಸರ್ಕಾರಗಳು ಭಯೋತ್ಪಾಧಕರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ದೇಶದ ಜನರೇ ಮನಸ್ಸು ಗಟ್ಟಿ ಮಾಡಿಕೊಂಡು ಕಾಯುವ ಮೂಲಕ ಪ್ರತಿಕಾರ ತೀರಿಸಿಕೊಂಡಿದ್ದರು. ಈಗ ಪಾಕಿಸ್ತಾನದ ಹಾಗೆ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಭಯೋತ್ಪಾದಕರ ನೆಲೆಗಳಿಗೆ ನುಗ್ಗಿ ಹೊಡೆಯುವ ತಾಕತ್ತು ನಮ್ಮ ದೇಶದ ರಕ್ಷಣಾ ವ್ಯವಸ್ಥೆಗಿದೆ. ಇದೆಲ್ಲಾ ಸಾಧ್ಯವಾಗಿದ್ದು ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ. ಹಾಗಾಗಿ ದೇಶದ ಜನರು ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ನೋಡಲು ಬಯಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇಂದು ಭಾರತ ಸದೃಢವಾಗಿದೆ:
1971ರಲ್ಲಿ ಸಂಭವಿಸಿದ ಭಾರತ-ಪಾಕ್ ಯುದ್ದದಲ್ಲಿ ಭಾರತದ 54 ಸೈನಿಕರು ಪಾಕ್ ಸೇನೆಯ ವಶವಾಗಿದ್ದರು. ಅವರು ಏನಾಗಿದ್ದರೆ ಎಂಬುವುದು ಇಂದಿಗೂ ಯಾರಿಗೂ ಗೊತ್ತಿಲ್ಲ. ಮೊನ್ನೆ ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕ್ ಯುದ್ದ ವಿಮಾನವನ್ನು ಹೊಡೆದುರುಳಿಸಿ ಪಾಕ್‌ಸೇನೆಯ ವಶವಾಗಿದ್ದರು. ಎರಡೇ ದಿನದಲ್ಲಿ ಅಭಿನಂದನ್‌ನನ್ನು ಭಾರತಕ್ಕೆ ವಾಪಸ್ಸು ಕರೆತರಲಾಯಿತು. ಇದು ಭಾರತ ದೇಶದ ಇಂದಿನ ಸಾಮರ್ಥ್ಯ. ಭಾರತ ಎಷ್ಟು ಸದೃಢವಾಗಿದೆ ಎಂಬುವುದನ್ನು ಈ ಒಂದು ಘಟನೆಯಿಂದಲೇ ತಿಳದುಕೊಳ್ಳಬಹುದಾಗಿದೆ ಎಂದರು.