ಮಲ್ಪೆ: ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರನೋರ್ವ ಮೃತಪಟ್ಟ ಘಟನೆ ಮಲ್ಪೆ ಬಂದರಿನಿಂದ ಸರಿಸುಮಾರು 13 ನಾಟಿಕಲ್ ಮೈಲ್ ದೂರದಲ್ಲಿ ಸಂಭವಿಸಿದೆ.
ಸುಧಾಕರ ವೆಂಕಣ್ಣ ಹೊಸಕಟ್ಟಿ (39) ಮೃತ ಮೀನುಗಾರ. ಇವರು ಮಲ್ಪೆಯ ಸೋಮಶೇಖರ ಬಂಗೇರ ಸೇರಿದ ತ್ರಿಜಲ್ ಬೋಟಿನಲ್ಲಿ ದುಡಿಯುತ್ತಿದ್ದರು. ಜ. 10ರಂದು ಸಂಜೆ 4 ಗಂಟೆಗೆ ಮಲ್ಪೆ ಬಂದರಿನಿಂದ ಮೀನುಗಾರರಾದ ಉಮೇಶ್, ರಾಮ, ಶರತ್, ಚುಡಾಮಣಿ ಅವರೊಂದಿಗೆ ಆಳಸಮುದ್ರ ಮೀನುಗಾರಿಕೆ ತೆರಳಿದ್ದರು.
ಜ. 13ರಂದು ಮಧ್ಯರಾತ್ರಿ 1ಗಂಟೆ ಸುಮಾರಿಗೆ 13 ನಾಟಿಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಬಲೆ ಎಳೆಯುತ್ತಿದ್ದ ಸುಧಾಕರ ವೆಂಕಣ್ಣ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದಿದ್ದಾರೆ. ಬೋಟಿನೊಳಗಿದ್ದ ಇತರ ಮೀನುಗಾರರು ರಕ್ಷಿಸಲು ಪ್ರಯತ್ನಿಸಿದರು ಸುಧಾಕರ್ ಪತ್ತೆಯಾಗಿರಲಿಲ್ಲ.
ಅದೇ ಬೋಟ್ ನಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆ ಜ. 15ರಂದು ಮಧ್ಯಾಹ್ನ 1.45ಕ್ಕೆ ಸುಮಾರಿಗೆ ಮಲ್ಪೆ ಬಂದರಿನ 10 ನಾಟಿಕಲ್ ಮೈಲ್ ದೂರದಲ್ಲಿ ಸುಧಾಕರ ವೆಂಕಣ್ಣ ಹೊಸಕಟ್ಟಿ ಅವರ ಮೃತದೇಹ ದೊರಕಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.