ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ಗಳ ವಿವಾದದ ನಂತರ ಮಾಲ್ಡೀವ್ಸ್ ಸರ್ಕಾರ ತನ್ನ ಮೂವರು ಸಚಿವರನ್ನು ಅಮಾನತುಗೊಳಿಸಿದೆ.
ಲಕ್ಷದ್ವೀಪ ಮತ್ತು ಮಾಲ್ಡೀವ್ಸ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಜಟಾಪಟಿ ನಡೆಸಿದ ಸಚಿವರು ಮತ್ತು ಸಂಸದರು ಮಾಡಿದ ಹೇಳಿಕೆಗಳಿಂದ ಮಾಲ್ಡೀವ್ಸ್ ಸರ್ಕಾರ ದೂರವಾದ ಕೆಲವೇ ಗಂಟೆಗಳ ಬಳಿಕ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಶರೀಫ್ ಮತ್ತು ಮಹಜೂಮ್ ಮಜೀದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಬಳಿಕ ಪ್ರವಾಸಿಗರಲ್ಲಿ ಕುತೂಹಲ ಹೆಚ್ಚಾಗಿದ್ದು, ಲಕ್ಷದ್ವೀಪಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಚಿವರು ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ಬಗ್ಗೆ ಹೋಲಿಕೆ ಸಾಧ್ಯವಿಲ್ಲ, ಪ್ರಧಾನಿ ಮೋದಿ ಕೋಡಂಗಿ ಮತ್ತು ಕೈಗೊಂಬೆ ಎನ್ನುವಂತಹ ಹೇಳಿಕೆಗಳನ್ನು ನೀಡಿದ್ದಾರೆ.
ಮಾಲೆಯಲ್ಲಿರುವ ಭಾರತೀಯ ಹೈಕಮಿಷನ್ ಮಾಲ್ಡೀವಿಯನ್ ವಿದೇಶಾಂಗ ಸಚಿವಾಲಯದೊಂದಿಗೆ ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದೆ.
ಭಾರತದ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರು ಮಾಲ್ಡೀವ್ಸ್ ಸಚಿವರ ಈ ಹೇಳಿಕೆಗಳನ್ನು ಖಂಡಿಸಿದ್ದಾರೆ.
ಭಾರತದ ಟ್ರಾವೆಲ್ ಏಜೆನ್ಸಿ ಸಂಸ್ಥೆ EaseMyTrip ತನ್ನ ವೆಬ್ಸೈಟ್ನಲ್ಲಿ ಮಾಲ್ಡೀವ್ಸ್ಗೆ ಎಲ್ಲಾ ವಿಮಾನ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ ಎಂದು ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿಶಾಂತ್ ಪಿಟ್ಟಿ ಸೋಮವಾರ ಪ್ರಕಟಿಸಿದ್ದಾರೆ.
ನಮ್ಮ ರಾಷ್ಟ್ರದ ಜೊತೆ ಏಕತೆಯಿಂದ ಬೆಂಬಲ ನೀಡುವ ನಿಟ್ಟಿನಲ್ಲಿ EaseMyTrip ಎಲ್ಲಾ ಮಾಲ್ಡೀವ್ಸ್ ಫ್ಲೈಟ್ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಅವರ ಚೀನಾ ಭೇಟಿಗೂ ಮೊದಲು ಈ ವಿವಾದ ಉದ್ಭವಿಸಿದೆ. ಹೊಸದಾಗಿ ನೇಮಕಗೊಂಡ ಅಧ್ಯಕ್ಷ ಕೇವಲ ಒಂದು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ಚೀನಾದೊಂದಿಗೆ ನಿಕಟ ಹೊಂದಾಣಿಕೆಯನ್ನು ಪ್ರದರ್ಶಿಸಿದ್ದಾರೆ. ಅಧ್ಯಕ್ಷರಾದ ಬಳಿಕ ಅವರು ಮಾಲ್ಡೀವ್ಸ್ನಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ತೆಗೆದುಹಾಕುವಂತೆಯೂ ಕರೆ ನೀಡಿದ್ದರು. ಇದು ಅವರ ಚೀನಾ ಪ್ರೀತಿಯನ್ನು ಹೊರಗೆಡಹುತ್ತಿದ್ದು, ಭಾರತ ದ್ವೇಷವನ್ನು ಜಗಜ್ಜಾಹೀರು ಮಾಡುತ್ತಿದೆ ಎನ್ನಲಾಗಿದೆ.