ಅಪರೂಪದ ಮಲಬಾರ್ ಟ್ರೀ ಟೋಡ್ ಕಪ್ಪೆ 110 ಕಡೆಗಳಲ್ಲಿ ಪತ್ತೆ: ಕಪ್ಪೆ ಅಧ್ಯಯನಕ್ಕಾಗಿ ನಡಿತಿದೆ ವಿಶೇಷ ಅಭಿಯಾನ

ವಿಶೇಷ ವರದಿ-ಎನ್.ಎಚ್ ಪೊಲ್ಯ

ಉಡುಪಿ:  ಪಶ್ಚಿಮಘಟ್ಟ ಪ್ರದೇಶದಲ್ಲಿ ಮೂರು ವಾರಗಳ ಕಾಲ ಮಾತ್ರ ಕಂಡುಬರುವ ಎಂಡೆಮಿಕ್ ಮತ್ತು ಅಳಿವಿ ನಂಚಿನಲ್ಲಿರುವ ಅತ್ಯಂತ ವಿಶಿಷ್ಟ ಕಪ್ಪೆ ಪ್ರಬೇಧ ‘ಮಲಬಾರ್ ಟ್ರೀ ಟೋಡ್’ ಕುರಿತು ಈಗಾಗಲೇ ಅಧ್ಯಯನವನ್ನು ಕೈಗೆತ್ತಿಕೊಳ್ಳಲಾದ್ದು ಈ ಅಭಿಯಾನದಲ್ಲಿ  5 ವರ್ಷಗಳಲ್ಲಿ ಸುಮಾರು 110 ಕಡೆಗಳಲ್ಲಿ ಈ ಕಪ್ಪೆ ಪತ್ತೆಯಾಗಿದೆ. ಮೆಟಸ್ಟ್ರಿಂಗ್ ಫೌಂಡೇಶನ್ ಮುನ್ನಡೆಸುತ್ತಿರುವ ಇಂಡಿಯಾ ಬಯೋ ಡೈವರ್ಸಿಟಿ ಪೋರ್ಟಲ್‌ನಲ್ಲಿರುವ ಫ್ರಾಗ್ ವಾಚ್ ಮೂಲಕ ‘ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್’ ಎಂಬ ಅಭಿಯಾನವನ್ನು 2015ರಿಂದ ನಡೆಸಲಾಗುತ್ತಿದೆ. ಈ ಅಭಿಯಾನಕ್ಕೆ ಬೆಂಗಳೂರು ಸೃಷ್ಠಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಡಿಸೈನ್ ಆ್ಯಂಡ್ ಟೆಕ್ನಾಲಜಿ ಸಹಯೋಗ ನೀಡಿದೆ. ಕಪ್ಪೆ ಸಂಶೋಧಕರಾದ ಡಾ.ಗುರುರಾಜ ಕೆ.ವಿ., ಡಾ.ಹರಿಕೃಷ್ಣ, ಡಾ.ರವಿ ಚೆಲ್ಲಮ್  ಇದನ್ನು ಮುನ್ನಡೆಸುತ್ತಿದ್ದಾರೆ.
 ಕಪ್ಪೆ ಪತ್ತೆಯಾದ ಜಾಗಗಳು

ಸುಮಾರು 1875ರಲ್ಲಿ ವಿಜ್ಞಾನಿ ಗುನ್ಸಾರ್ ಈ ಕಪ್ಪೆಯನ್ನು ಮೊದಲ ಬಾರಿಗೆ ಆವಿಷ್ಕಾರ ಮಾಡಿದ್ದರು. ಆಗ ಅವರು ಆ ಜಾಗದ ಹೆಸರನ್ನು ಮಲಬಾರ್ ಎಂಬುದಾಗಿ ನಮೂದಿಸಿದ್ದರು. ಬಳಿಕ ಆ ಕಪ್ಪೆಗೆ ‘ಪಿಡೊ ಸ್ಟೈಬ್ಸ್ ಟ್ಯುಬರ್‌ಕ್ಯುಲೋಸಸ್’ ಎಂಬ ವೈಜ್ಞಾನಿಕ ಹೆಸರನ್ನು ನೀಡಲಾಗಿತ್ತು. ಮುಂದೆ 105 ವರ್ಷಗಳ ನಂತರ ಅಂದರೆ 1980 ಮತ್ತೊಬ್ಬರು ಈ ಕಪ್ಪೆ ಯನ್ನು ಕೇರಳದಲ್ಲಿ ನೋಡಿದ್ದರೆಂಬುದಾಗಿ 1985ರಲ್ಲಿ ಪಿಳ್ಳೈ ಎಂಬವರು ವರದಿ ಮಾಡಿದ್ದರು.

ಫೋಟೋಗಳು: ಗೋಪಾಲಕೃಷ್ಣ ಭಟ್- ಅಜಿತ್

 

110 ವರ್ಷಗಳ ಭಾರತದಲ್ಲಿ ಎರಡನೆ ಬಾರಿಗೆ ಈ ಕಪ್ಪೆಯ ಬಗ್ಗೆ ವರದಿ ಬಂತು. ಅದರ ನಂತರ ಗೋವಾ ಮತ್ತು ಕೇರಳ(ಎರಡನೆ ಬಾರಿಗೆ)ದಿಂದ ವರದಿ ಯಾಗಿತ್ತು. ಆದರೆ ಕರ್ನಾಟಕದಲ್ಲಿ ಈ ಕಪ್ಪೆಯನ್ನು ನೋಡಿರುವ ಬಗ್ಗೆ ಯಾವುದೇ ವರದಿ ಆಗಿರಲಿಲ್ಲ.

ಸೃಷ್ಠಿ ಸಂಸ್ಥೆಯ ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. 2004ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ಬಳಿ ಈ ಕಪ್ಪೆಯನ್ನು ಪತ್ತೆ ಹಚ್ಚುವ ಮೂಲಕ ಕರ್ನಾಟಕದಿಂದ ಮೊತ್ತಮೊದಲ ವರದಿಯನ್ನು ಮಾಡಿದರು. ಅಲ್ಲಿಂದ ಈ ಪ್ರಬೇಧವನ್ನು ‘ಮಲಬಾರ್ ಟ್ರೀ ಟೋಡ್’ ಎಂಬುದಾಗಿ ನಾಮಕರಣ ಮಾಡಿ ಕರೆಯಲಾಯಿತು.

ಮಳೆ ಬಿದ್ದ ಮೂರು ವಾರಗಳಲ್ಲಿ ಮತ್ತು ಮೊಟ್ಟೆ ಇಟ್ಟ ಬಳಿಕ ನಾಪತ್ತೆಯಾಗುವ ಈ ಕಪ್ಪೆ, ಆ ನಂತರ ಯಾರ ಕಣ್ಣಿಗೂ ಈವರೆಗೆ ಕಾಣ ಸಿಕ್ಕಿಲ್ಲ. ನೆಲದ ಮೇಲೆ ಕಂಡುಬರುವ ನೆಲಗಪ್ಪೆ ಕುಟುಂಬಕ್ಕೆ ಸೇರಿದ ಮಲಬಾರ್ ಟ್ರೀ ಟೋಡ್‌ನ ಕೈಯಲ್ಲಿರುವ ಬೆರಳ ತುದಿಯಲ್ಲಿ ಮರ, ಗೋಡೆ ಹತ್ತಲು ಸಹಾಯ ವಾಗುವ ಚಪ್ಪಟೆ ಆಕಾರದ ಡಿಸ್ಕ್‌ಗಳಿರುವುದು ಅದ್ಭುತ.

 ಈ ಕಪ್ಪೆ ಯಾವ ಯಾವ ಭಾಗಗಳಲ್ಲಿ ಕಂಡುಬರುತ್ತವೆ ಎಂಬುದರ ಬಗ್ಗೆ ಅಧ್ಯಯನ ನಡೆಸುವುದು ಈ ಅಭಿಯಾನದ ಉದ್ದೇಶವಾಗಿದೆ.  2015ಕ್ಕೆ ಪ್ರಾರಂಭಿಸಲಾದ ಈ ಅಭಿಯಾನ ಆರಂಭದ ಮೊದಲ 3 ವರ್ಷ ಗಳಲ್ಲಿ 50-55 ಕಡೆಗಳಿಂದ ಜನ ಈ ಕಪ್ಪೆಯನ್ನು ನೋಡಿರುವ ಬಗ್ಗೆ ವರದಿ ಮಾಡಿದರು. 2019ರವರೆಗೆ ಒಟ್ಟು 74 ಕಡೆಗಳಿಂದ ವರದಿಯಾಗಿತ್ತು. ಈ ಬಾರಿ ಸುಮಾರು 30-35ಕಡೆಗಳಿಂದ ವರದಿಯಾಗುವ ಮೂಲಕ ಒಟ್ಟು 110 ಸ್ಥಳಗಳಲ್ಲಿ ಈ ಕಪ್ಪೆ ಪತ್ತೆಯಾಗಿರುವುದು ದೃಢಪಟ್ಟಿವೆ ಎಂದು ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. ತಿಳಿಸಿದ್ದಾರೆ.

ತರಬೇತಿ ನೀಡಲು ದಾಂಡೇಲಿ ಮತ್ತು ಕಾರ್ಕಳದ ಮಾಳದಲ್ಲಿ ಸಿದ್ಧತೆ
ಮಲಬಾರ್ ಟ್ರೀ ಟೋಡ್ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ನಿಟ್ಟಿನಲ್ಲಿ ಹೆಚ್ಚಿನವರಿಗೆ ತರಬೇತಿ ನೀಡುವಂತೆ ಹ್ಯಾಬಿಟ್ಯಾಟ್ ಟ್ರಸ್ಟ್ ಈ ವರ್ಷ ಸಹಾಯನಿಧಿಯನ್ನು ನೀಡಿದೆ. ಅದರಂತೆ ಸುಮಾರು 40 ಮಂದಿಗೆ ತರಬೇತಿ ನೀಡಲು ದಾಂಡೇಲಿ ಮತ್ತು ಕಾರ್ಕಳದ ಮಾಳದಲ್ಲಿ ಸಿದ್ಧತೆ ಮಾಡಲಾಗಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ. ಇದೀಗ ಆನ್‌ಲೈನ್‌ನಲ್ಲಿ ಯೂಟ್ಯೂಬ್, ವಾಟ್ಸಾಪ್ ಮೂಲಕ ಆ ಕಪ್ಪೆ ಯನ್ನು ಹೇಗೆ ನೋಡಬೇಕು ಯಾವ ರೀತಿಯಲ್ಲಿ ನೋಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎನ್ನುತ್ತಾರೆ ಗುರುರಾಜ್ ಕೆ.ವಿ.