ಉಡುಪಿ: ಕಬಡ್ಡಿಯಿಂದ ಮಕ್ಕಳ ಏಕಾಗೃತೆ ವೃದ್ಧಿಯಾಗುವುದರ ಜತೆಗೆ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೂಡ ಸದೃಢಗೊಳ್ಳುತ್ತದೆ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.
ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಪುರುಷರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಕೂಟ ಶ್ರೀ ಪ್ರಜ್ಞಾ ಟ್ರೋಫಿ—2019 ಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯರ ಆರೋಗ್ಯ ಚೆನ್ನಾಗಿರಬೇಕಾದರೆ ಮಣ್ಣಿನ ಸಂಪರ್ಕ ಕೂಡ ಇರಬೇಕೆಂದು ಹಿರಿಯರು ಹೇಳಿದ್ದಾರೆ. ಅದಕ್ಕಾಗಿ ಹಿಂದೆ ಹಳ್ಳಿಗಳಲ್ಲಿ ದೇಗುಲಕ್ಕೆ ಮಣ್ಣಿನ ನೆಲದಲ್ಲಿ ಅಂಗ ಪ್ರದಕ್ಷಿಣೆಗಳನ್ನು ಹಾಕಲಾಗುತ್ತಿತ್ತು. ಆದರೆ ಇಂದಿನ ಮಕ್ಕಳು ಇದನ್ನು ಅನುಸರಿಸಲು ಒಪ್ಪಲ್ಲ. ಆ ಕಾರಣಕ್ಕಾಗಿ ಮಕ್ಕಳಿಗೆ ಮಣ್ಣಿನ ಸಂಪರ್ಕ ಮಾಡುವ ಕಬಡ್ಡಿ ಆಟವನ್ನು ಸೃಷ್ಟಿಸಿ, ಆ ಮೂಲಕ ಅವರ ಆರೋಗ್ಯ ವೃದ್ಧಿಗೆ ವೇದಿಕೆ ಕಲ್ಪಿಸಲಾಯಿತು ಎಂದರು.
ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಲ್ಲಿ ಮಾತ್ರ ಅವರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಹಿಂದೆ ಹಳ್ಳಿಗಳಿಗೆ ಸೀಮಿತವಾಗಿದ್ದ ಕಬಡ್ಡಿ, ಇಂದು ಜನಪ್ರಿಯ ಕ್ರೀಡೆಯಾಗಿ ರೂಪುಗೊಂಡಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಕಬಡ್ಡಿ ಕ್ರೀಡೆಯಲ್ಲಿ ಉತ್ತಮ ಅವಕಾಶಗಳಿವೆ. ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಬಡ್ಡಿಯಲ್ಲಿ ಜಿಲ್ಲಾ ಸಾಕಷ್ಟು ಕ್ರೀಡಾಪಟುಗಳು ಅಂತರರಾಷ್ಟ್ರೀಯ ಸಾಧನೆ ಮಾಡಿದ್ದಾರೆ. ಆ ಮೂಲಕ ನಮ್ಮ ನೆಲದ ಗ್ರಾಮೀಣ ಕ್ರೀಡೆಯನ್ನು ದೇಶ ವಿದೇಶಗಳಿಗೆ ಪರಿಚಯಿಸುತ್ತಿದ್ದಾರೆ ಎಂದು ಹೇಳಿದರು.
ಕ್ರೀಡಾಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಸ್ಪರ್ಧಿಸುವುದೆಂದರೆ ಕಷ್ಟದ ಕೆಲಸ. ನಾನು ವೇಟ್ ಲಿಫ್ಟಿಂಗ್ನಲ್ಲಿ ಅಂತರರಾಷ್ಟ್ರೀಯ ಸಾಧನೆ ಮಾಡಲು 8 ವರ್ಷ ಶ್ರಮಪಟ್ಟಿದ್ದೇನೆ. 2020 ಒಲಿಂಪಿಕ್ಸ್ನಲ್ಲಿ ಭಾಗವಹಿಸಬೇಕಾದರೆ ವರ್ಲ್ಡ್ ಚಾಂಪಿಯನ್ ಶಿಪ್ ಹಾಗೂ ಏಷ್ಯಾನ್ ಗೇಮ್ಸ್ನಲ್ಲಿ ಸ್ಪರ್ಧಿಸಬೇಕಾಗಿದೆ. ಅದಕ್ಕಾಗಿ ಏಪ್ರಿಲ್ 1ರಿಂದ ಇಂಡಿಯಾನ್ ಕ್ಯಾಂಪಸ್ಗೆ ಹೋಗುತ್ತಿದ್ದೇನೆ ಎಂದು ಅಂತರರಾಷ್ಟ್ರೀಯ ವೇಟ್ ಲಿಫ್ಟಿರ್ ಗುರುರಾಜ್ ಪೂಜಾರಿ ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಡಗುಬೆಟ್ಟು ಕ್ರೆಡಿಟ್ ಕೋ—ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಕಾಲೇಜಿನ ಪ್ರಾಂಶುಪಾಲೆ ಡಾ. ಜೆ. ಸುಕನ್ಯಾ ಮೇರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಮಕೃಷ್ಣ ಉಡುಪ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಶಿಶ್ ಪೈ, ಕಾರ್ಯದರ್ಶಿ ಪ್ರಕಾಶ್ ಪಾಟೀಲ್, ಉಪಾಧ್ಯಕ್ಷ ಯಶವಂತ್, ಕ್ರೀಡಾ ಕಾರ್ಯದರ್ಶಿಗಳಾದ ವೃದ್ಧಿಕಾ ಶೆಟ್ಟಿ, ಮಂದಾರ ಶೆಟ್ಟಿ, ಶೈಲೇಶ್ ಶೆಟ್ಟಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ್ ಜೋಗಿ ಸ್ವಾಗತಿಸಿದರು. ಸತೀಶ್ ಚಿತ್ರಾಪುರ ನಿರೂಪಿಸಿದರು.