ಸುಳ್ಳುಸುದ್ದಿ ತಡೆಯಲು ಸೂಕ್ತ ವ್ಯವಸ್ಥೆ ರೂಪಿಸಿ: ಕೇಂದ್ರಕ್ಕೆ ಖಡಕ್ ಸೂಚನೆ ಕೊಟ್ಟ ಸುಪ್ರೀಂ ಕೋರ್ಟ್

ನವದೆಹಲಿ: ಸುದ್ದಿವಾಹಿನಿಗಳು ಮತ್ತು ಇತರ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಹಬ್ಬಿಸುವುದನ್ನು ನಿಯಂತ್ರಿಸಲು ವ್ಯವಸ್ಥೆ ರೂಪಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ತಬ್ಲೀಗ್‌ ಜಮಾತ್‌ನಿಂದ ಕೋವಿಡ್‌ ಹರಡಿತು ಎಂದು ಕೆಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದ ವರದಿಗಳ ವಿರುದ್ಧ ಜಮಾತ್ ಉಲೇಮಾ ಎ ಹಿಂದ್ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾಧ ಎ.ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ ಮಂಗಳವಾರ ಈ ಸೂಚನೆ ನೀಡಿತು.

ಸುದ್ದಿವಾಹಿನಿಗಳಲ್ಲಿ ಸುಳ್ಳುಸುದ್ದಿಗಳನ್ನು ತಡೆಯಲು ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆ ಅಡಿ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಹಿಂದಿನ ವಿಚಾರಣೆ ವೇಳೆ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಸುದ್ದಿವಾಹಿನಿಗಳ ಮೇಲೆ ಸಾರಾಸಗಟಾಗಿ ನಿಷೇಧ ಹೇರುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಸುದ್ದಿವಾಹಿನಿಗಳ ಸ್ವಯಂ ನಿಯಂತ್ರಣಕ್ಕೆ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್ ಸ್ಟಾಂಡರ್ಡ್ ಅಥಾರಿಟಿ (ಎನ್‌ಬಿಸಿಎ) ಇದೆ ಎಂದು ಸರ್ಕಾರವು ವಿಚಾರಣೆ ವೇಳೆ ಪೀಠಕ್ಕೆ ತಿಳಿಸಿತು.

ಸರ್ಕಾರದ ಈ ಉತ್ತರಕ್ಕೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನಾವು ಕೇಳಿದ್ದ ಯಾವ ಪ್ರಶ್ನೆಗೂ ನಿಮ್ಮ ಪ್ರಮಾಣಪತ್ರದಲ್ಲಿ ಉತ್ತರ ಇಲ್ಲ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲದೇ ಇದ್ದರೆ, ಒಂದು ವ್ಯವಸ್ಥೆಯನ್ನು ರೂಪಿಸಿ. ಸುಳ್ಳು ಸುದ್ದಿಗೆ ತಡೆ ಒಡ್ಡುವ ಅಧಿಕಾರ ಸರ್ಕಾರಕ್ಕೆ ಇರುವಾಗ, ಎನ್‌ಬಿಎಸ್‌ಎಯಂತಹ ಹೊರಗಿನ ಸಂಸ್ಥೆಗೆ ಏಕೆ ನಿಯಂತ್ರಣದ ಜವಾಬ್ದಾರಿ ವಹಿಸಬೇಕು’ ಎಂದು ಪೀಠವು ಪ್ರಶ್ನಿಸಿತು.