ಇಂದಿನಿಂದ ‘ಆದಾಯ ತೆರಿಗೆ’ಯಲ್ಲಿ ಮಹತ್ತರ ಬದಲಾವಣೆ: ಬದಲಾದ ನಿಯಮವೇನು?

ನವದೆಹಲಿ: ಆದಾಯ ತೆರಿಗೆ ನಿಯಮಗಳಲ್ಲಿ ಏಪ್ರಿಲ್‌ 1 ರಿಂದ ಮಹತ್ವದ ಬದಲಾವಣೆಯಾಗಿದೆ. ಮುಖ್ಯವಾಗಿ 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ಆದಾಯ ತೆರಿಗೆ ಕಾಯ್ದೆ 2025(Income Tax Act, 2025) ಜಾರಿಗೆ ಬರಲಿದೆ. ಹೊಸ ತೆರಿಗೆ ಪದ್ಧತಿಯಡಿ ವಾರ್ಷಿಕ 12 ಲಕ್ಷ ರೂ. ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50 ಸಾವಿರ ರೂ. ನಿಂದ 75 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಇದು ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮಾತ್ರ ಅನ್ವಯಿಸುತ್ತದೆ. ಈ 75 ಸಾವಿರ ರೂ. ಕಡಿತ ಮತ್ತು ಸೆಕ್ಷನ್ 87A ಅಡಿಯಲ್ಲಿ ಸಿಗುವ ರಿಯಾಯಿತಿಯಿಂದಾಗಿ ಹೊಸ ಪದ್ಧತಿಯಲ್ಲಿ ವಾರ್ಷಿಕ 12.75 ಲಕ್ಷದವರೆಗೆ ಆದಾಯ ಇರುವ ಸಂಬಳದಾರರು ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಂಡರೆ ಈ ಮೊತ್ತವು 50 ಸಾವಿರ ರೂ. ಆಗಿರುತ್ತದೆ.

ಏನಿದು ಸ್ಟ್ಯಾಂಡರ್ಡ್ ಡಿಡಕ್ಷನ್?
ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಸರ್ಕಾರ ನೀಡುವ ಒಂದು ರೀತಿಯ ‘ಫ್ಲಾಟ್ ಡಿಸ್ಕೌಂಟ್’ ಅಥವಾ ತೆರಿಗೆ ವಿನಾಯಿತಿ. ಸಾಮಾನ್ಯವಾಗಿ ತೆರಿಗೆ ಉಳಿಸಲು ವಿಮೆ, ಬಾಡಿಗೆ ರಶೀದಿ ಅಥವಾ ಹೂಡಿಕೆಯ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಆದರೆ ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆಯಲು ನೀವು ಯಾವುದೇ ದಾಖಲೆ ಅಥವಾ ಖರ್ಚಿನ ಬಿಲ್‌ಗಳನ್ನು ನೀಡುವ ಅಗತ್ಯವಿಲ್ಲ. ಒಟ್ಟು ವಾರ್ಷಿಕ ಸಂಬಳದಿಂದ ಈ ಮೊತ್ತವನ್ನು ನೇರವಾಗಿ ಕಳೆಯಲಾಗುತ್ತದೆ. ಉಳಿದ ಮೊತ್ತದ ಮೇಲೆ ಮಾತ್ರ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಇದು ಕೇವಲ ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮಾತ್ರ ಸಿಗುತ್ತದೆ. ವ್ಯಾಪಾರಸ್ಥರಿಗೆ ಅಥವಾ ಸ್ವಯಂ ಉದ್ಯೋಗಿಗಳಿಗೆ ಇದು ಅನ್ವಯಿಸುವುದಿಲ್ಲ. ಉದ್ಯೋಗಿಗಳು ಕೆಲಸಕ್ಕೆ ತೆರಳಲು ಮಾಡುವ ಪ್ರಯಾಣ ವೆಚ್ಚ ಅಥವಾ ಇತರ ಸಣ್ಣಪುಟ್ಟ ಖರ್ಚುಗಳನ್ನು ಸರಿದೂಗಿಸಲು ಸರ್ಕಾರ ಈ ವಿನಾಯಿತಿಯನ್ನು ನೀಡುತ್ತದೆ.

ಐಟಿಆರ್ ಅಪ್‌ಡೇಟೆಡ್ ಹೇಗೆ:
ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಮತ್ತು ಪರಿಷ್ಕರಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಅಂದರೆ ನಿಗದಿತ ಸಮಯದೊಳಗೆ (ಜುಲೈ 31) ಐಟಿಆರ್ ಸಲ್ಲಿಸಲು ವಿಫಲರಾದರೆ ದಂಡದೊಂದಿಗೆ ಸಲ್ಲಿಸಲು ಮಾರ್ಚ್ 31 ಕೊನೆಯ ಅವಕಾಶ ನೀಡಲಾಗಿದೆ. ಈ ಡೆಡ್‌ಲೈನ್‌ ನಂತರವೂ ‘ಅಪ್‌ಡೇಟೆಡ್ ಐಟಿಆರ್’ (Updated ITR – U) ಮಾತ್ರ ಸಲ್ಲಿಸಲು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ಹೆಚ್ಚಿನ ತೆರಿಗೆ ಮತ್ತು ದಂಡ ಅನ್ವಯವಾಗುತ್ತದೆ.

ಫಾರ್ಮ್-16 ಜಾಗದಲ್ಲಿ ಫಾರ್ಮ್ 130:
ಆದಾಯ ತೆರಿಗೆ ಕಾಯ್ದೆ 2025ರ ಅಡಿಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ‘ಫಾರಂ 16’ (Form 16) ಬದಲಿಗೆ ಫಾರಂ 130 (Form 130) ಪರಿಚಯಿಸಲಾಗುತ್ತಿದೆ. ಇದು ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೀಡಲಾಗುವ ಹೊಸ ವಾರ್ಷಿಕ ಟಿಡಿಎಸ್ (TDS) ಪ್ರಮಾಣಪತ್ರವಾಗಿದೆ. ಹೊಸ ಫಾರಂ 130 ಒಟ್ಟು ಮೂರು ಮುಖ್ಯ ಭಾಗವನ್ನು ಹೊಂದಿದೆ.

ಭಾಗ A – ಉದ್ಯೋಗದಾತ ಮತ್ತು ಉದ್ಯೋಗಿಯ ಸಂಪೂರ್ಣ ವಿವರಗಳು.
ಭಾಗ B – ಪಾವತಿಸಿದ ಒಟ್ಟು ಸಂಬಳ ಮತ್ತು ಕಡಿತಗೊಳಿಸಲಾದ ತೆರಿಗೆಯ (TDS) ಸಾರಾಂಶ.
ಭಾಗ C – ತೆರಿಗೆಗೆ ಒಳಪಡುವ ಆದಾಯದ ಲೆಕ್ಕಾಚಾರ, ವಿನಾಯಿತಿಗಳು ಮತ್ತು ಡಿಡಕ್ಷನ್‌ ವಿವರವಾದ ಮಾಹಿತಿ.

ಇದು ಸಂಬಳದಾರರು ಮತ್ತು ಪಿಂಚಣಿದಾರರಲ್ಲದೆ, ಬ್ಯಾಂಕ್‌ಗಳಿಂದ ಬಡ್ಡಿ ಆದಾಯ ಪಡೆಯುವ ಹಿರಿಯ ನಾಗರಿಕರಿಗೂ ಅನ್ವಯಿಸುತ್ತದೆ. ಇದು TRACES ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಇದನ್ನು ಮ್ಯಾನುವಲ್ ಆಗಿ ನೀಡಲು ಅವಕಾಶವಿಲ್ಲ.

2026-27ನೇ ಸಾಲಿನ ಮೊದಲ ಫಾರಂ 130 ಅನ್ನು 2027ರ ಜೂನ್ 15ರೊಳಗೆ ನೀಡಲಾಗುತ್ತದೆ. ಅಲ್ಲಿಯವರೆಗೆ (ಜೂನ್ 2026 ರವರೆಗೆ) ಫಾರಂ 16 ಬಳಕೆಯಲ್ಲಿರುತ್ತದೆ.