ಮೈತ್ರಿ ಸರಕಾರ ಉರುಳಿಸಲು‌ ಬಿಜೆಪಿ ಷಡ್ಯಂತ್ರ: ವಿನಯ ಕುಮಾರ್ ಸೊರಕೆ

ಉಡುಪಿ: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸಲು ಬಿಜೆಪಿ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ರಾಜ್ಯ ಮೈತ್ರಿ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ಮಾಡುತ್ತಿದ್ದು, ಇದರಲ್ಲಿ ಕರ್ನಾಟಕದ ರಾಜ್ಯಪಾಲರು ಸೇರಿ ಕೊಂಡಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದರು.
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಹಣದ ಆಮಿಷವೊಡ್ಡಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಜ್ಜರಕಾಡಿನ ಸೈನಿಕರ ಹುತಾತ್ಮ ಸ್ಮಾರಕದ ಎದುರು ಬುಧವಾರ ಹಮ್ಮಿಕೊಂಡ ಬೃಹತ್‌ ಪ್ರತಿಭಟನೆಯಲ್ಲಿ  ಅವರು ಮಾತನಾಡಿದರು.
ಬಿಜೆಪಿ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆಡಳಿತ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಶಾಸಕರ ಖರೀದಿ ಮಾಡುತ್ತಿದೆ. ಶಾಸಕರ ಖರೀದಿಗಾಗಿ 1 ಸಾವಿರ ಕೋಟಿಕ್ಕಿಂತಲೂ ಅಧಿಕ ಹಣವನ್ನು ವಿನಿಯೋಗಿಸಿದೆ. ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವ ಸ್ಪೀಕರ್ ಅನ್ನು ಟಾರ್ಗೆಟ್‌ ಮಾಡುತ್ತಿದೆ ಎಂದರು.
ಶಾಸಕರನ್ನು ಖರೀದಿಸುವ ಮೂಲಕ ಬಿಜೆಪಿ ನಾಯಕರು ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ.
ಒಬ್ಬೊಬ್ಬರು ಶಾಸಕರಿಗೆ ವಿಮಾನ ಕಾಯ್ದಿರಿಸಿ ಮುಂಬೈಗೆ ಕಳುಹಿಸುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪರಿಂದ ಹಿಡಿದು ರಾಜ್ಯದ ಪ್ರಮುಖ ನಾಯಕರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಟೀಕಿಸಿದರು.
ಮೈತ್ರಿ ಸರ್ಕಾರ ರಾಜ್ಯದಲ್ಲಿ ಅನೇಕ ಒಳ್ಳೆಯ ಕಾರ್ಯಗಳನ್ನು ನಡೆಸಿದೆ. ರಾಷ್ಟ್ರೀಕೃತ
ಬ್ಯಾಂಕ್‌ಗಳಲ್ಲಿರುವ ರೈತರ 49 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ಯೋಜನೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಆದರೆ ಅದನ್ನು ಅರಗಿಸಿಕೊಳ್ಳಲು ಆಗದ ಬಿಜೆಪಿ ನಾಯಕರು ಆರಂಭದಿಂದಲೂ ಸರ್ಕಾರವನ್ನು ಕೆಡವಲು ಯತ್ನಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾರ್ಯದರ್ಶಿ ನರಸಿಂಹಮೂರ್ತಿ, ಮುಖಂಡರಾದ ಹರೀಶ್‌ ಕಿಣಿ ಅಲೆವೂರು, ಪ್ರಖ್ಯಾತ್‌ ಶೆಟ್ಟಿ, ಸರಳಾ ಕಾಂಚನ್‌, ಸರಸು ಡಿ. ಬಂಗೇರ, ಗೀತಾ ವಾಗ್ಲೆ, ಸುನೀತಾ ಶೆಟ್ಟಿ, ಪ್ರಶಾಂತ್‌ ಜತ್ತನ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ವಿಶ್ವಾಸ್‌ ಅಮೀನ್‌, ಕಿರಣ್‌ ಕುಮಾರ್‌ ಉದ್ಯಾವರ, ಸುನಿಲ್‌ ಬಂಗೇರ, ಕೇಶವ ಕೋಟ್ಯಾನ್‌, ರೋಶನಿ ಒಲಿವೆರಾ, ಉದ್ಯಾವರ ನಾಗೇಶ್‌ ಕುಮಾರ್‌, ಚಂದ್ರಿಕಾ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.