ನೃತ್ಯ-ಯೋಗ ಲೋಕದ ಪುಟಾಣಿ ಕಿನ್ನರಿ ಇವಳು: ಕುಂದಾಪುರದ ಮಹಿಮ ಅನ್ನೋ ಹುಡುಗಿಯ ಸಾಧನೆಯ ಕತೆ ಇದು!

» ನೀತು ಬೆದ್ರ

ಕತ್ತಲೆ ಗರ್ಭದಿ 9 ತಿಂಗಳು ಕಳೆದು, ಜನಿಸಿದ ಮಗುವು ತಂದೆತಾಯಿಯ ಲಾಲನೆ ಪೋಷಣೆಯಲ್ಲಿ ಬೆಳೆಯುತ್ತ,ಪರಿಸರದ ವಾತಾವರಣಕ್ಕೆ ಹೊಂದಿಕೊಂಡು ಅದರಂತೆ ಬಾಳುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯ ಪ್ರೀತಿಯೊಂದಿಗೆ ಹುಟ್ಟಿನಿಂದ ಬಂದ ಕಲೆಯನ್ನು ಕರಗತ ಮಾಡಿದ ದಿಟ್ಟೆ, ನಾಟ್ಯ ಹಾಗೂ ಯೋಗದಲ್ಲಿ ರಾಷ್ಟ್ರವ ಮೆಚ್ಚಿಸಿದ ಚಿನಕುರುಳಿ ಮಹಿಮಾ ಕುಂದಾಪುರ.

ಲತಾ ಹಾಗೂ ರಾಮ ಮೊಗೆರ್ ದಂಪತಿಗಳ ಪುಟ್ಟ ಕಂದಮ್ಮ ಹನ್ನೆರಡರ ನಾಟ್ಯ ರತ್ನ ಈ ಮಹಿಮಾ. ಎಲ್ ಕೆ ಜಿ, ಯು ಕೆ ಜಿ ಹಾಗೂ ಮೂರನೇ ತರಗತಿ ತನಕ ಸಿ ಎಸ್ ಐ ಕೃಪಾ ವಿದ್ಯಾಲಯ ಕುಂದಾಪುರದಲ್ಲಿ ಅಭ್ಯಸಿಸಿದ ಇವರು 7 ನೇ ತರಗತಿಯವರೆಗೆ ಸೈಂಟ್ ಮೇರಿಸ್ ಹೈಯರ್ ಪ್ರೈಮರಿಯ ವಿದ್ಯಾರ್ಥಿನಿ.

ತಾನು ಮೂರನೇ ವಯಸ್ಸಿನಲ್ಲಿರುವಾಗಲೇ ನೃತ್ಯ,ಯೋಗದ ಬಗ್ಗೆ ಗಮನ ಹರಿಸಿದ ಇವರು,ಶಾಲಾ ದಿನಗಳಲ್ಲಿನ ಪ್ರತಿಭಾ ಕಾರಂಜಿ,ಸಂಗೀತ,ನೃತ್ಯ,ಈಜು,ಅಡುಗೆ ಸ್ಪರ್ಧೆ ಮುಂತಾದ ಎಲ್ಲಾ ಸ್ಪರ್ಧೆಯ ಸ್ಪರ್ಧಾರ್ಥಿ. ಹರೀಶ್ ಪೂಜಾರಿಯವರ ಜೆ ಜೆ ಡಾನ್ಸ್ ಅಕಾಡೆಮಿ ಕುಂದಾಪುರ ,ವಿಘ್ನೇಶ್ ಆಚಾರ್ಯರವರ ಬೆಸ್ಟ್ ಗೈಸ್ ಕ್ರಿವ್ ನಾಡಗುಡ್ಡೆಯಂಗಡಿ ಮುಂತಾದ ಕಡೆ ನೃತ್ಯವನ್ನು ಕಲಿತು ಕಲಾ ಕ್ಷೇತ್ರದಲ್ಲಿ ಸಾಧನೆಗೈದವರು ಮಹಿಮಾ.

ಕಳೆದ ಬಾರಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಯೋಗ ಮತ್ತು ನೃತ್ಯದಲ್ಲಿ ಭಾರತ ಶ್ರೇಷ್ಠ ರತ್ನ ಪ್ರಶಸ್ತಿಯನ್ನು ಪಡೆದವರು.
ರಾಷ್ಟ್ರ ಮಟ್ಟದ ನ್ಯಾಷನಲ್ ಮೋಡೆಲ್ ಐಕಾನ್ ಹಂಟ್ ವಿನ್ನರ್ ,ಕುಂದಾಪುರ ಗೋಟ್ ಟ್ಯಾಲೆಟ್ ಮುಂತಾದ ಹತ್ತು ಹಲವು ಪ್ರಶಸ್ತಿ ಪಡೆದವರು. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸುಮಾರು 600 ಕ್ಕೂ ಅಧಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟ ಕೀರ್ತಿ ಇವರಿಗಿದೆ.
ತನ್ನ ತಂದೆ ತಾಯಿ ಹಾಗೂ ಗುರುಗಳ ಸ್ಪೂರ್ತಿಯಿಂದ ಬೆಳೆದ ಇವರು ಕುಂದಾಪುರದ ಜನತೆಯ ಕಣ್ಮಣಿಯಾಗಿ, ನೃತ್ಯ ಹಾಗೂ ಯೋಗ ಲೋಕದ ಸಾರಥಿಯಾಗಿ,ಬೆಳೆಯುತ್ತಿರುವ ಮಹಿಮಾ ಇನ್ನೂ ಹತ್ತು ಹಲವು ಪ್ರಶಸ್ತಿ ಪಡೆದು ಬೆಳೆಯಲಿ ಎಂಬುದೇ ನನ್ನ ಆಶಯ.

               ನೀತು ಬೆದ್ರ