ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಬೇಟಿ ಬಚಾವೋ -ಬೇಟಿ ಪಡಾವೋ ಕಾರ್ಯಗಾರ ಉದ್ಘಾಟಣೆ: ಪ್ರಕಾಶ್ ಖಂಡೇರಿ

ಕುಂದಾಪುರ: ಭ್ರೂಣ ಹತ್ಯೆ, ಅತ್ಯಾಚಾರ, ಲೈಂಗಿಕ ಕಿರುಕುಳ ಇವೆಲ್ಲವುಗಳಿಂದ ಮಹಿಳೆಗೆ ಮುಕ್ತಿ ಸಿಕ್ಕಾಗ ಮಾತ್ರ ಸುಭಿಕ್ಷ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಐಎಮ್‍ಎ ಕುಂದಾಪುರ, ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಬೇಟಿ ಬಚಾವೋ -ಬೇಟಿ ಪಡಾವೋ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಮಹಿಳೆಯರಿಗೆ ಸ್ವಾತಂತ್ರ್ಯವಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಮಹಿಳೆಗೆ ಸ್ವಾತಂತ್ರ್ಯವೆನ್ನುವುದು ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಇಂದು ಮಹಿಳೆಯರನ್ನು ರಕ್ಷಿಸಿಕೊಳ್ಳಲಾಗದ ವ್ಯವಸ್ಥೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳಿದ್ದು, ಈ ಮೂರು ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದಾಗ ಉತ್ತಮ ಆಡಳಿತದಲ್ಲಿ ಉತ್ತಮ ರಾಜ್ಯ ನಿರ್ಮಾಣ ಸಾಧ್ಯ. ಒಳ್ಳೆಯ ಸರಕಾರ, ಒಳ್ಳೆಯ ವ್ಯವಸ್ಥೆಯ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ನಾವು ಮನಗಾಣಬೇಕು. ಅಲ್ಲದೇ ನಮ್ಮ ಸರ್ವೋಚ್ಛ ನ್ಯಾಯಾಲಯವು ಹೆಣ್ಣಿನ ವಿವಿಧ ತೆರನಾದ ಶೋಷಣೆಗಳ ವಿರುದ್ಧ ಕಾನೂನು ಮತ್ತು ನಿರ್ದೇಶನಗಳನ್ನು ರೂಪಿಸಿದೆ. ಕಾನೂನಿನ ಮೂಲಕ ಮಹಿಳೆಯ ರಕ್ಷಣೆಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕುಂದಾಪುರ ಸಹಾಯಕ ಆಯುಕ್ತ ಡಾ.ಮಧುಕೇಶ್ವರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸುರತ್ಕಲ್‍ನ ಜಿಲ್ಲಾ ತರಬೇತಿ ಕೇಂದ್ರ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಸೇವೇಗಳು ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಡಾ.ರಾಮಚಂದ್ರ ಬಾಯರಿ ದಿಕ್ಸೂಚಿ ಭಾಷಣ ಮಾಡಿದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ರಾಮಚಂದ್ರ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ರಾಜ್ಯ ಘಟಕದ ಸದಸ್ಯರಾದ  ಡಾ.ಕೆ.ಎಸ್.ಕಾರಂತ್, ಕುಂದಾಪುರ ವಿಭಾಗದ ಅಧ್ಯಕ್ಷರಾದ ಡಾ.ಶೇಖರ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ತಾಲೂಕಾ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ವಕೀಲರಾದ ಟಿ.ಬಿ.ಶೆಟ್ಟಿ, ಮತ್ತು ಸಮಾಜ ಸೇವಕಿ ವೆರೋನಿಕಾ ಕಾರ್ವಾಲಿಯೋ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕಿ ಡಾ.ಯಶವಂತಿ ಕೆ ವಂದಿಸಿದರು. ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರ್ವಹಿಸಿದರು.
ಬೇಟಿ ಬಚಾವೋ -ಬೇಟಿ ಪಡಾವೋ ಕಾರ್ಯಗಾರ: 
ಸಭಾ ಕಾರ್ಯಕ್ರಮದ ಬಳಿಕ “ಮಹಿಳಾ ರಕ್ಷಣೆ”– ಕಾನೂನು ಎಂಬ ವಿಷಯದ ಕುರಿತು ವಕೀಲರಾದ ಟಿ.ಬಿ ಶೆಟ್ಟಿ ಮಾತನಾಡಿ ಕಾನೂನಿನ ನೆಲೆಯಲ್ಲಿ ಮಹಿಳೆಯು ತನ್ನನ್ನು ರಕ್ಷಿಸಿಕೊಳ್ಳಲು ಅವಶ್ಯಕ ಮತ್ತು ಅತ್ಯಗತ್ಯ ಕಾನೂನಿನ ಮಾಹಿತಿ ನೀಡಿದರು.
“ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆ” ಎಂಬ ವಿಷಯದ ಕುರಿತು ಮಾತನಾಡಿದ ಸಮಾಜ ಸೇವಕಿ ವೆರೋನಿಕಾ ಕಾರ್ವಾಲಿಯೋ, ಸಬಲೀಕರಣ ಮತ್ತು ಸಾಮಾಜಿಕ ನೆಲೆಗಳಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆಯ ಕುರಿತು ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮ್ ರಾವ್.ಕೆ “ಲಿಂಗ ಭ್ರೂಣ ಪತ್ತೆ ನಿಷೇಧ ಕಾಯಿದೆ” ಕುರಿತಂತೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
ಕುಂದಾಪುರದ ಮನೀಷ್ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಪ್ರಮೀಳಾ ನಾಯಕ್ “ಮಹಿಳೆಯರ ಆರೋಗ್ಯ”ದ ಕುರಿತು ಮಾತನಾಡಿದರು. ಅಲ್ಲದೇ ಕ್ಯಾನ್ಸರ್ ಕಾಯಿಲೆ, ಮುಟ್ಟಿನ ತೊಂದರೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹಿಳೆಯ ಆಹಾರ ಮತ್ತು ದಿನಚರಿಯ ಕುರಿತು ಮಾಹಿತಿ ನೀಡಿದರು.
ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯ ಡಾ.ಶ್ರೀಕಾಂತ್ ದಂತ ಆರೋಗ್ಯದ ಕುರಿತು ಮಾಹಿತಿ ನೀಡಿ ಮಕ್ಕಳಿಂದ ದೊಡ್ಡವರವರೆಗೂ ಹಲ್ಲನ್ನು ಕಾಪಾಡಿಕೊಳ್ಳುವ ಮಾರ್ಗ ಮತ್ತು ಪರಿಹಾರೋಪಾಯಗಳನ್ನು ತಿಳಿಸಿದರು.