ಅಂತಾರಾಷ್ಟ್ರೀಯ ಪ್ರಶಸ್ತಿಯ ಅಂತಿಮಪಟ್ಟಿಗೆ ಮಾಹೆಯ ಸಿಐಎಸ್‌ಡಿ; ‘ಲಿವಿಂಗ್‌ ಕಲ್ಚರ್ಸ್ ಆಫ್‌ ತುಳುನಾಡು’ ಯೋಜನೆಗೆ ಸಿಕ್ಕಿದ ಮನ್ನಣೆ.!

ಮಣಿಪಾಲ: 2026 -ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಘಟಕವಾದ ಸೆಂಟರ್‌ ಫಾರ್‌ ಇಂಟರ್‌ ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌ ಪ್ರಸ್ತುತಪಡಿಸಿದ ನವೀನ ಕಲಿಕಾ ಯೋಜನೆಯು ಲಂಡನ್‌ನ ಕ್ಯುಎಸ್‌ ರಿ-ಇಮ್ಯಾಜಿನ್‌ ಎಜುಕೇಶನ್‌ನ ಪ್ರತಿಷ್ಠಿತ ಪ್ರಶಸ್ತಿಯ ಅಂತಿಮಪಟ್ಟಿಗೆ ಆಯ್ಕೆಯಾಗಿದೆ.

ಕ್ಯುಎಸ್‌ ರಿ-ಇಮ್ಯಾಜಿನ್‌ ಎವರ‍್ಡ್ಸ್‌2026 ಕ್ಕೆ 2,226 ಪ್ರವೇಶಗಳು ಬಂದಿದ್ದು, ಅಂತಿಮಪಟ್ಟಿಗೆ ಆಯ್ಕೆಯಾದ ಯೋಜನೆಗಳಲ್ಲಿ ಸಿಐಎಸ್‌ಡಿಯ ‘ಲಿವಿಂಗ್‌ ಕಲ್ಚರ್ಸ್ ಆಫ್‌ ತುಳುನಾಡು’ಕೂಡ ಸೇರಿರುವುದು ಗಮನರ‍್ಹವೆನಿಸಿದೆ.

ವಿಶ್ವಾದ್ಯಂತವಿರುವ 1,634 ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳ ತಜ್ಞರನ್ನೊಳಗೊಂಡ ಆಯ್ಕೆ ಮಂಡಳಿ ನಾಲ್ಕು ಸುತ್ತಿನ ಕಠಿಣ ಮೌಲ್ಯಮಾಪನದ ಮೂಲಕ ಈ ಅಂತಿಮಪಟ್ಟಿಯನ್ನು ಸಿದ್ಧಪಡಿಸಿವೆ.

ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ ಶ್ರೇಯಾಂಕ (ವರ್ಲ್ಡ್ ಯೂನಿವರ್ಸಿಟಿ ರೇಂಕಿಂಗ್‌) ಕ್ಕೆ ಸಂಬಂಧಿಸಿದ ಸಂಸ್ಥೆಯಾಗಿರುವ ಕ್ವಾಕ್ವರೇಲಿ ಸೀಮಂಡ್ಸ್‌ ನ್ನು ಹೃಸ್ವವಾಗಿ ‘ಕ್ಯುಎಸ್‌ ಎಂದಷ್ಟೇ ಸಂಬೋಧಿಸಲಾಗುತ್ತಿದ್ದು ಅದು ಪ್ರವರ್ತಿಸಿರುವ ‘ಕ್ಯುಎಸ್‌-ರೀಇಮ್ಯಾಜಿನ್‌ ಎಜುಕೇಶನ್‌’ ಪ್ರಶಸ್ತಿಯು ಜಾಗತಿಕವಾಗಿ ಪ್ರತಿಷ್ಠಿತವಾಗಿದೆ. ಈ ಪುರಸ್ಕೃತರನ್ನು ‘ಆಸ್ಕರ್ಸ್ ಆಫ್‌ ಎಜುಕೇಶನ್‌’ ಎಂದು ಕರೆಯಲಾಗುತ್ತಿದೆ. ಸಿಐಎಸ್‌ಡಿಗೆ ನೀಡಲಾಗಿರುವ ಪ್ರಮಾಣಪತ್ರದಲ್ಲಿ ‘ಲಿವಿಂಗ್‌ ಕಲ್ಚರ್ಸ್ ಆಫ್‌ ತುಳುನಾಡು’ ಯೋಜನೆಯು ನಾವೀನ್ಯ, ಪ್ರಭಾವ, ಮೌಲ್ಯಗಳನ್ನು ಹೊಂದಿರುವುದಕ್ಕಾಗಿ ಪ್ರಶಸ್ತಿಯ ಅಂತಿಮಪಟ್ಟಿಗೆ ಆಯ್ಕೆಯಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿಗಳ ಕಲಿಕಾ ಫಲಿತಾಂಶಗಳನ್ನು ಸುಧಾರಿಸುವ, ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ಬೋಧನಾ ವಿಧಾನಗಳು, ಡಿಜಿಟಲ್ ಸಾಧನಗಳು ಹಾಗೂ ಸಾಂಸ್ಥಿಕ ಕಾರ್ಯವಿಧಾನಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ‘ಕ್ಯುಎಸ್‌ ರಿ-ಇಮ್ಯಾಜಿನ್‌ ಎಜುಕೇಶನ್‌ ಪ್ರಶಸ್ತಿ’ಯ ಉದ್ದೇಶವಾಗಿದೆ. ಪ್ರಸ್ತುತ ಸಿಐಎಸ್‌ಡಿಯ ಯೋಜನೆಯು ‘ಸುಸ್ಥಿರತೆಯ ಶೈಕ್ಷಣಿಕ ಅರಿವು’ (ಸಸ್ಟೇನೇಬಿಲಿಟಿ ಎಜುಕೇಶನ್‌ ಲಿಟರಸಿ) ವಿಭಾಗದಲ್ಲಿ ಅಂತಿಮಪಟ್ಟಿಯಲ್ಲಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.

ಸಿಐಎಸ್‌ಡಿಯ ‘ಲಿವಿಂಗ್‌ ಕಲ್ಚರ್ಸ್ ಆಫ್‌ ತುಳುನಾಡು’ ನವೀನ ಶೈಕ್ಷಣಿಕ ಉಪಕ್ರಮವು ಕ್ಯುಎಸ್‌ ರಿ-ಇಮ್ಯಾಜಿನ್‌ ಎಜುಕೇಶನ್‌ನ ಪ್ರತಿಷ್ಠಿತ ಪ್ರಶಸ್ತಿಯ ಅಂತಿಮಪಟ್ಟಿಗೆ ಆಯ್ಕೆಯಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಐಎಸ್‌ಡಿಯ ಸಂಯೋಜಕರಾದ ಪ್ರೊ. ಪ್ರವೀಣ್ ಕೆ. ಶೆಟ್ಟಿ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತ, ‘ಇತ್ತೀಚೆಗಿನ ದಿನಗಳಲ್ಲಿ ನವೀನ ಶೈಕ್ಷಣಿಕ ಬೋಧನವಿಧಾನದ ಕುರಿತ ಶೋಧನೆಗಳು ನಡೆಯುತ್ತಿವೆ. ಮಾಹೆಯಲ್ಲಿಯೂ ಬಿಯಾಂಡ್‌ ಕರಿಕ್ಯುಲಮ್‌’ ಕಲಿಕಾವಿಧಾನದ ಭಾಗವಾಗಿ ಸಿಐಎಸ್‌ಡಿಯು ತುಳುನಾಡಿನ ಭಾಷಿಕ, ಸಾಂಸ್ಕೃತಿಕ, ಜಾನಪದ ಬದುಕಿನ ಕುರಿತ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯಗಳ ಚೌಕಟ್ಟಿನಾಚೆಗಿನ ಅನುಭವ ಮತ್ತು ಅರಿವನ್ನು ವಿಸ್ತರಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಸುಸ್ಥಿರತೆಯ ಅರಿವನ್ನು ಮೂಡಿಸುವ ಶೈಕ್ಷಣಿಕ ವಿಧಾನವನ್ನಾಗಿ ನಮ್ಮ ಪ್ರಯತ್ನವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿರುವುದು ಹೆಮ್ಮೆ ತಂದಿದೆ’ ಎಂದರು.

ಕ್ಯುಎಸ್ ರಿಇಮ್ಯಾಜಿನರಿ ಎಜುಕೇಶನ್‌ನ ಪ್ರಶಸ್ತಿ ಪ್ರದಾನ ಮತ್ತು ಸಮಾವೇಶ ಡಿಸೆಂಬರ್‌ 6 ರಿಂದ 8 ರವರೆಗೆ ಲಂಡನ್‌ನಲ್ಲಿ ಜರಗಲಿದೆ.