ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸ: 16 ಭದ್ರತಾ ಸಿಬ್ಬಂದಿ ಹುತಾತ್ಮ

ಮಹಾರಾಷ್ಟ್ರ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಂತೆಯೇ ನಕ್ಸಲರು ನಡೆಸಿದ ಭೀಕರ ದಾಳಿಗೆ 16 ಮಂದಿ ಯೋಧರು ಹುತಾತ್ಮರಾಗಿದ್ದಾರೆ.

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಕ್ಸಲರು ಐಇಡಿ ಬಾಂಬ್ ದಾಳಿ ನಡೆಸಿ ಗುಂಡಿನ ಮಳೆಗೆರೆದ ಪರಿಣಾಮ 16 ಮಂದಿ ಯೋಧರು ಹುತಾತ್ಮರಾದ ಘಟನೆ ಬುಧವಾರ ನಡೆದಿದೆ. ಘಟನೆಯಲ್ಲಿ ವಾಹನದ ಚಾಲಕ ಸಹ ಮೃತಪಟ್ಟಿದ್ದಾರೆ.

ಕುರ್ಕೆಡಾದಿಂದ ಕ್ಷಿಪ್ರ ಕಾರ್ಯಾಚರಣಾ ತಂಡದ 16 ಭದ್ರತಾ ಸಿಬ್ಬಂದಿಯನ್ನು ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಜಂಬೋರ್ಖೇಡಾ ಮತ್ತು ಲೆಂಧಾರಿ ನಡುವೆ ನಕ್ಸಲರು ವಾಹನವನ್ನು ಸ್ಫೋಟಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿನೆ:

ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ, ಅವರನ್ನು ಹತ್ಯೆ ಮಾಡಿದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಮ್ಮ ಭದ್ರತಾ ಸಿಬ್ಬಂದಿ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಎಲ್ಲ ಧೈರ್ಯಶಾಲಿ ಯೋಧರಿಗೆ ನಮನಗಳು. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ಹುತಾತ್ಮ ಯೋಧರ ಕುಟುಂಬಕ್ಕೆ ನನ್ನ ಸಂತಾಪಗಳು. ಇಂತಹ ಹಿಂಸಾಚಾರ ನಡೆಸಿದ ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.