ಭಾರತದ ಮನೆಮಾತಾಗಿರುವ ಮ್ಯಾಗಿ ನ್ಯೂಡಲ್ಸ್ Maggi Noodles ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾಗಿಯೊಳಗೆ ಕೀಟ ಪತ್ತೆ, ಎಂದು ವಿಡಿಯೋ ವೈರಲ್ ಆದ ಬೆನ್ನಲ್ಲೇ, ಅಲ್ಲದೇ ಮ್ಯಾಗಿ ಮೇಲೆ ಗ್ರಾಹಕರ ದೂರಿನ ಆಧಾರದ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ Food Safety and Standards Authority of India, Nestlé Indiaಗೆ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಮ್ಯಾಗಿ ನೂಡಲ್ಸ್ ಪ್ಯಾಕೆಟ್ನಲ್ಲಿ ಕೀಟ ಅಥವಾ ಲಾರ್ವಾ ಪತ್ತೆಯಾಗಿದೆ ಎಂಬ ಆರೋಪವೇ ಈ ಬೆಳವಣಿಗೆಗೆ ಕಾರಣವಾಗಿದೆ.
ಆರೋಪದ ಹಿನ್ನೆಲೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‌ಎಸ್‌ಎಸ್‌ಎಐ, ನೆಸ್ಲೆ ಇಂಡಿಯಾದಿಂದ ವಿವರವಾದ ಸ್ಪಷ್ಟೀಕರಣ ಕೇಳಿದೆ. ಕಂಪನಿಯ ಗುಣಮಟ್ಟ ನಿಯಂತ್ರಣ ಕ್ರಮಗಳು, ಪೂರೈಕೆದಾರರ ದಾಖಲೆಗಳು ಹಾಗೂ ಕೈಗೊಂಡಿರುವ ಸರಿಪಡಿಸುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಆದರೆ ಇದು ಪ್ರಾಥಮಿಕ ಮಾಹಿತಿ ಸಂಗ್ರಹ ಪ್ರಕ್ರಿಯೆಯಾಗಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ನಿಯಂತ್ರಕ ಸಂಸ್ಥೆ ಇನ್ನೂ ಬಂದಿಲ್ಲ ಎಂದು ತಿಳಿಸಲಾಗಿದೆ.
ಷೇರುಪೇಟೆಯಲ್ಲಿ ಪರಿಣಾಮ
ಈ ವರದಿ ಹೊರಬಿದ್ದ ಬಳಿಕ ಹೂಡಿಕೆದಾರರಲ್ಲಿ ಆತಂಕ ಹೆಚ್ಚಿದ್ದು, ನೆಸ್ಲೆ ಇಂಡಿಯಾ ಷೇರುಗಳಲ್ಲಿ ಭಾರಿ ಮಾರಾಟ ಕಂಡುಬಂದಿದೆ. ಬೆಳಿಗ್ಗೆ ಏರಿಕೆಯಲ್ಲಿ ವಹಿವಾಟು ಆರಂಭಿಸಿದ್ದ ಷೇರು, ಸುದ್ದಿಯ ನಂತರ ತೀವ್ರ ಕುಸಿತ ಕಂಡು ದಿನದ ಕನಿಷ್ಠ ಮಟ್ಟಕ್ಕೆ ಇಳಿಯಿತು. ಅಂತಿಮವಾಗಿ ಷೇರು ಶೇಕಡಾ 3.23ರಷ್ಟು ಇಳಿಕೆಯೊಂದಿಗೆ ₹1,375.85ಕ್ಕೆ ಮುಕ್ತಾಯಗೊಂಡಿತು. ಕಂಪನಿಯ ಮಾರುಕಟ್ಟೆ ಮೌಲ್ಯವೂ ಸುಮಾರು ₹2.65 ಲಕ್ಷ ಕೋಟಿಗೆ ಇಳಿದಿದೆ.
ಎಫ್‌ಎಸ್‌ಎಸ್‌ಎಐ, ಸಂಬಂಧಿತ ಬ್ಯಾಚ್‌ನ ಉತ್ಪಾದನಾ ಮೂಲ ಮತ್ತು ಪೂರೈಕೆದಾರರ ವಿವರ ಆಂತರಿಕ ಗುಣಮಟ್ಟ ಪರಿಶೀಲನಾ ದಾಖಲೆಗಳು ಮಾರುಕಟ್ಟೆಯಿಂದ ಉತ್ಪನ್ನ ಹಿಂಪಡೆಯಲು ಕೈಗೊಂಡ ಕ್ರಮಗಳು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳಲಾಗುತ್ತಿರುವ ತಡೆಗಟ್ಟುವ ಕ್ರಮಗಳು ಇವುಗಳ ಬಗ್ಗೆ ಕಂಪೆನಿ ಬಳಿ ಮಾಹಿತಿ ಕೇಳಿದೆ
ಈ ಪ್ರಕರಣದ ತನಿಖೆ ಮುಂದುವರಿದಿದ್ದು, ನೆಸ್ಲೆ ಇಂಡಿಯಾದ ಉತ್ತರ ಹಾಗೂ ಎಫ್‌ಎಸ್‌ಎಸ್‌ಎಐ ಪರಿಶೀಲನೆಯ ಬಳಿಕವೇ ಆರೋಪದ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.

















