ದಕ್ಷ ಅಧಿಕಾರಿಯ ಅಂತಿಮ ದರ್ಶನಕ್ಕೆ ಕಣ್ಣೀರಾದ ಯಡಾಡಿ:ಹುಟ್ಟೂರ ಮಣ್ಣಲ್ಲಿ ಮಧುಕರ್ ಶೆಟ್ಟಿ ಲೀನ

 ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಲೋಕ ಬಿಟ್ಟು ಹೋಗಿಲ್ಲ, ಹುಟ್ಟೂರ  ಮಣ್ಣಲ್ಲೇ ಇದ್ದಾರೆ ಮತ್ತೆ ಹುಟ್ಟಿ ಬಂದೇ ಬರುತ್ತಾರೆ ಎಂದು ಕಣ್ಣೀರಾಗುತ್ತ ಯಡಾಡಿ ಭಾನುವಾರ ಮತ್ತಷ್ಟು ಮೌನವಾಯಿತು.

ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥೀವ ಶರೀರದ ಅಂತಿಮ ಸಂಸ್ಕಾರ ಹುಟ್ಟೂರಾದ ಯಡಾಡಿ-ಮತ್ಯಾಡಿಯ ಮನೆಯಲ್ಲಿ ಭಾನುವಾರ ನೆರವೇರಿತು.

ಬೆಳಿಗ್ಗೆ ೮ ಗಂಟೆಗೆ ಮಧುಕರ್ ಶೆಟ್ಟಿಯವರ ಪಾರ್ಥೀವ ಶರೀರ ಯಡಾಡಿ ಮತ್ಯಾಡಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಬೆಳಿಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಕುಟುಂಬಿಕರು, ಸಹೋದ್ಯೋಗಿಗಳು, ಅವರ ಅಪಾರ ಅಭಿಮಾನಿಗಳು ಮೃತದೇಹದ ಅಂತಿಮ ದರ್ಶನಗೈದು ಕಂಬನಿ ಮಿಡಿದರು.

ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ:

ಲೋಕಾಯುಕ್ತ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಭ್ರಷ್ಟಚಾರಿಗಳಿಗೆ ಸಿಂಹ ಸ್ವಪ್ನರಾಗಿದ್ದ ದಿಟ್ಟ ಅಧಿಕಾರಿ ಮಧುಕರ್ ಶೆಟ್ಟಿಯವರಿಗೆ ಹುಟ್ಟೂರ ಮನೆಯಲ್ಲಿ ಮೂರು ಸುತ್ತು ಕುಶಾಲತೋಪು ಹಾರಿಸುವುದರ ಮೂಲಕ ಸಕಲ ಸರ್ಕಾರಿ ಗೌರವದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಭಾರತದ ಬಾವುಟ ಹಾಗೂ ಪೊಲೀಸ್ ಸಮವಸ್ತೃವನ್ನು ಮೃತ ಮಧುಕರ್ ಶೆಟ್ಟಿ ಪತ್ನಿಗೆ ಹೈದರಬಾದ್ ಡಿಜಿಪಿ ಬರ್ಮಾನ್ ಹಸ್ತಾಂತರಿಸಿದರು. ಬಳಿಕ ಮತ್ಯಾಡಿ ಮನೆಯ ರೈ ಫಾರ್ಮ್ ತೋಟದಲ್ಲಿ ಮಧುಕರ್ ಶೆಟ್ಟಿ ಸಹೋದರ ಮುರುಳೀಧರ ಶೆಟ್ಟಿ ಕ್ರಿಯಾವಿಧಿ ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಜಿಲ್ಲಾಡಳಿತ ಅಂತ್ಯಕ್ರಿಯೆಗೆ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿತು.

ಕಣ್ಣೀರಲ್ಲಿ ತೊಯ್ದ ಹುಟ್ಟೂರು:

ಮಧುಕರ ಶೆಟ್ಟರ ಜೊತೆ ಕೆಲಸ ನಿರ್ವಹಿಸಿದ ಅವರದೇ ಬ್ಯಾಚ್‌ನ ಎಲ್ಲಾ ಪೊಲೀಸ್ ಅಧಿಕಾರಿಗಳು ಹುಟ್ಟೂರಿಗೆ ಆಗಮಿಸಿದ್ದು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಮಧುಕರ ಶೆಟ್ಟರ ಮನೆಯ ಮುಭಾಗದಲ್ಲಿ ಜಮಾಯಿಸಿದ್ದ ಪೊಲೀಸ್ ಅಧಿಕಾರಿಗಳು ಮಧುಕರ ಶೆಟ್ಟರ ಪಾರ್ಥೀವ ಶರೀರವನ್ನು ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಹೃದಯ ವಿದ್ರಾವಕವಾಗಿತ್ತು.

ಪತಿಯ ಹಣೆಗೆ ಪತ್ನಿಯ ಕೊನೆ ಮುತ್ತು:

ಅಂತಿಮ ವಿಧಿವಿಧಾನಗಳು ಮುಗಿದ ಬಳಿಕ ಪತಿಗೆ ಪತ್ನಿ ಸುವರ್ಣ ಕೊನೆಯ ಮುತ್ತು ನೀಡಿ  ತನ್ನ ಆತ್ಮಸಖನ ಹಣೆಯಲ್ಲಿ ಕಣ್ಣೀರಾಗಿ ಹೋದರು. ಬಳಿಕ ಮೃತದೇಹಕ್ಕೆ ಹೊದಿಸಲಾದ ಬಾವುಟ ಹಾಗೂ ಸಮವಸ್ತೃ ಹಸ್ತಾಂತರಿಸಿದ ಬಳಿಕ ಹೈದರಬಾದ್ ಮಹಿಳಾ ಡಿಜಿಪಿಯವರನ್ನು ತಬ್ಬಿಕೊಂಡು ಕ್ಷಣಕಾಲ ಭಾವುಕರಾದರು.

ಮತ್ತೆ ಹುಟ್ಟಿ ಬಾ ಎಂದು ಪ್ರಾರ್ಥಿಸಿದರು:

ಮಧುಕರ್ ಶೆಟ್ಟಿಯವರ ಮೃತದೇಹ ನೋಡಲು ಐವತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ಮತ್ಯಾಡಿಗೆ ಆಗಮಿಸಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಅವರಿಂದ ಸಹಾಯ ಪಡೆದವರು, ಅಭಯಹಸ್ತ ಪಡೆದವರು ಎಲ್ಲರೂ ಜಾತ್ರೆಯಂತೆ ನೆರೆದು ಕೊನೆ ದರ್ಶನ ಪಡೆದರು.

ಗಣ್ಯರು ಭಾಗಿ:

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಮಾಜಿ ಸಂಸದ ಜಂiiಪ್ರಕಾಶ ಹೆಗ್ಡೆ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಎಂಎ ಗಫೂರ್, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ, ಐಜಿಪಿ ಸ್ಟೀಫನ್ ರವೀಂದ್ರ, ಮಧುಸೂದನ್ ರೆಡ್ಡಿ, ಐಜಿಪಿ ಜಿ.ಎಸ್ ರಾವ್, ಡಿಜಿಪಿ ಬರ್ಮಾನ್, ಡಿಐಜಿ ಅಮೃತಾ ದಾಸ್, ಎಡಿಜಿಪಿ ಪ್ರತಾಪ್ ರೆಡ್ಡಿ, ಐಜಿಪಿ ವಿಪುಲ್ ಕುಮಾರ್, ಎಸ್‌ಪಿ ಭೂಷಣ್ ಬೋರಸೆ, ಲಭೂರಾಮ್, ವಿನಾಯಕ ಪಾಟೀಲ್ ಸೇರಿದಂತೆ ಅನೇಕರು ಮಧುಕರ್ ಶೆಟ್ಟಿಯವರ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡರು.