ಕುಂದಾಪುರ : ಕಳೆದ ವರ್ಷ ಹೈದರ್‌ಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಕರ್ನಾಟಕದ ದಕ್ಷ ಪೊಲೀಸ್ ಐಪಿಎಸ್ ಅಧಿಕಾರಿ ದಿ.ಮಧುಕರ ಶೆಟ್ಟಿಯವರ ಯಡಾಡಿಮತ್ಯಾಡಿಯ ಮನೆಯಲ್ಲಿ ಅವರ ಕುಟುಂಬ ಸದಸ್ಯರು ಶನಿವಾರ ಅತ್ಯಂತ ಸರಳವಾಗಿ ನಿಧನದ ವಾರ್ಷಿಕ ಪುಣ್ಯ ಸ್ಮರಣೆ ಮಾಡಿದರು.
ತಂದೆ ದಿ.ವಡ್ಡರ್ಸೆ ರಘುರಾಮ ಶೆಟ್ಟಿ ಹಾಗೂ ತಾಯಿ ದಿ.ಪ್ರಫುಲ್ಲಾ ಶೆಟ್ಟಿಯವರ ಸಮಾಧಿಯ ಬಳಿಯಲ್ಲಿ ಮಾಡಲಾದ ದಿ.ಮಧುಕರ ಶೆಟ್ಟಿವರ ಸಮಾಧಿಗೆ ಶನಿವಾರ ಬೆಳಿಗ್ಗೆ ಕುಟುಂಬ ಸದಸ್ಯರು ಪುಷ್ಟಗಳನ್ನು ಅರ್ಪಿಸಿ ನಮನಗಳನ್ನು ಸಲ್ಲಿಸಿದರು. ಬೆಂಗಳೂರಿನ ಕಾಲೇಜು ದಿನಗಳ ಒಡನಾಡಿ ಹಾಗೂ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಅರುಣ್ ಚಕ್ರವರ್ತಿಯವರು ಸಮಾಧಿಗೆ ಗೌರವ ನಮನಗಳನ್ನು ಸಲ್ಲಿಸಿ, ಕುಟುಂಬ ಸದಸ್ಯರೊಂದಿಗೆ ನೆನಪುಗಳನ್ನು ಹಂಚಿಕೊಂಡರು. ಪತ್ನಿ ಸುವರ್ಣ ಮಧುಕರ ಶೆಟ್ಟಿ, ಪುತ್ರಿ ಸಮ್ಯ ಮಧುಕರ, ಸಹೋದರರಾದ ಮುರಳೀಧರ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಹೋದರ ಸಂಬಂಧಿ ವಡ್ಡರ್ಸೆ ನವೀನ್ ಶೆಟ್ಟಿ ಇದ್ದರು.
ಶನಿವಾರ ಬೆಳಿಗ್ಗೆ ಯಡಾಡಿಯ ಪ್ರಫುಲ್ಲಾ ರೈ ಫಾರ್ಮಗೆ ಬಂದಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದರು. ನಂತರ ದಿ.ಮಧುಕರ ಶೆಟ್ಟಿಯವರ ಸಮಾಧಿಯ ಬಳಿಕ ತೆರಳಿ ಹಣೆಯನ್ನು ಸಮಾಧಿಗೆ ತಗಲಿಸಿ ನಮಸ್ಕರಿಸಿದ ಅವರು, ಒಂದಷ್ಟು ಹೊತ್ತು ಭಾವುಕರಾದರು. ಹೈದರ್‌ಬಾದ್‌ನಿಂದ ಬಂದಿದ್ದ ಐಜಿಪಿ ಸ್ಟೀಫನ್ ರವೀಂದ್ರ, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ರವೀಂದ್ರ ಆರ್, ಕಾಲೇಜು ದಿನಗಳ ಸ್ನೇಹಿತರಾದ ಡಾ.ಶಿವಚರಣ್ ಶೆಟ್ಟಿ ಮಂಗಳೂರು, ಬಿ.ರಾಧಾಕೃಷ್ಣ ನಾಯಕ್ ಕುಂದಾಪುರ ಸಮಾಧಿಗೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದ್ದರು.
ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ೨ನೇ ಪುತ್ರರಾಗಿದ್ದ ಅವರು ೧೯೯೯ ರ ಐಪಿಎಸ್ ಬ್ಯಾಚ್‌ನ ಅಧಿಕಾರಿ. ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯಾಗಿದ್ದ ಅವರು ಚಿಕ್ಕಮಗಳೂರಿನಲ್ಲಿ ಎಸ್‌ಪಿ ಯಾಗಿದ್ದ ದಿನಗಳಲ್ಲಿ ಮೂಡುಗೆರೆ ತಾಲ್ಲೂಕಿನಲ್ಲಿ ದಲಿತ ಕುಟುಂಬಕ್ಕೆ ಆಗಿದ್ದ ಅನ್ಯಾಯಕ್ಕೆ ಸ್ಪಂದಿಸಿ ಅವರ ಕಣ್ಣೀರು ಒರೆಸಿದ್ದರಿಂದ ಜಿಲ್ಲಾಧಿಕಾರಿ ಹರ್ಷಾ ಗುಪ್ತಾ ಹಾಗೂ ಅವರ ನೆನಪಿನಲ್ಲಿ ಆ ಹಳ್ಳಿಗೆ ಗುಪ್ತಾಶೆಟ್ಟಿ ಹಳ್ಳಿ ಎಂದು ನಾಮಕರಣ ಮಾಡಲಾಗಿತ್ತು. ಚಾಮನಗರದ ಎಸ್.ಪಿ ಯಾಗಿದ್ದ ವೇಳೆ ಪೊಲೀಸ್ ಅಧೀಕ್ಷರ ನೂತನ ಕಚೇರಿಯನ್ನು ಯಾವುದೆ ಗಣ್ಯ ಅತಿಥಿಗಳನ್ನು ಕರೆಯದೆ ದೀನ ಬಂಧು ಆಶ್ರಮದ ಅನಾಥ ಮಕ್ಕಳಿಂದ ಉದ್ಘಾಟನೆ ಮಾಡಿಸಿದ್ದರು. ಲೋಕಾಯುಕ್ತ ಎಸ್‌ಪಿ ಯಾಗಿದ್ದ ದಿನಗಳಲ್ಲಿ ನಾಡು ತನ್ನ ಕಡೆ ನೋಡುವಂತೆ ಕರ್ತವ್ಯ ನಿರ್ವಹಿಸಿದ್ದರು