ಮಾದಕ ದ್ರವ್ಯ‌ ವ್ಯಸನ‌ ಸಮಾಜಕ್ಕೆ ಕಳಂಕ: ಹೆಪ್ಸಿಬಾ ರಾಣಿ

ಉಡುಪಿ: ಮಾದಕ ದ್ರವ್ಯ ವ್ಯಸನ ಸಮಾಜಕ್ಕೆ ಅಂಟಿಕೊಂಡಿರುವ ಕಳಂಕ. ಈ ಕಾನೂನು ವಿರೋಧಿ ಚಟುವಟಿಕೆಗಳ ವಿರುದ್ಧ ಜಾಗೃತ ಸಮಾಜ ಧ್ವನಿ ಎತ್ತಬೇಕು. ನಮ್ಮ ಮುಂದಿನ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಬೇಕು ಎಂದು ಉಡುಪಿ
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ ಶನಿವಾರ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ
ಏರ್ಪಡಿಸಲಾಗಿದ್ದ ಮಾದಕ ವ್ಯಸನ ವಿರೋಽಧಿ ಮಾಸಾಚರಣೆ ಮತ್ತು ಕಾರ್ಯಾಗಾರವನ್ನು
ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಶಿಕ್ಷಕ ಸಮುದಾಯವು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದರಿಂದ ಈ ಕಾರ್ಯವನ್ನು ನಿಷ್ಠೆಯಿಂದ ಮಾಡುವ ಮೂಲಕ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬೇಕು. ಸಮಾಜದಲ್ಲಿ ನಡೆಯುವ ಕಾನೂನು ವಿರೋಧಿ ಚಟುವಟಿಕೆಗಳ ಬಗ್ಗೆ ಶಿಕ್ಷಕರು ಸಾಮಾಜಿಕ
ಜವಾಬ್ದಾರಿಯನ್ನು ವಹಿಸಿಕೊಂಡು, ಇಂಥ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು
ಎಂದರು.
ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ‌ ಮಾತನಾಡಿ, ಮಾದಕ ದ್ರವ್ಯ ಸೇವನೆಯ ಚಟ ದೈಹಿಕ ಹಾಗೂ ಮಾನಸಿಕ ರೋಗವೇ ಹೊರತು ಯಾವುದೇ ಕ್ರಿಮಿನಲ್‌ ಅಪರಾಧ ಅಲ್ಲ. ಇದೊಂದು ವೈದ್ಯಕೀಯ ಸಮಸ್ಯೆಯಾಗಿರುವುದರಿಂದ ಇದನ್ನು
ಚಿಕಿತ್ಸೆಯ ಮೂಲಕ ಪರಿಹರಿಸಲು ಸಾಧ್ಯ ಎಂದರು.
ಭಾರತದಲ್ಲಿ ೧೬ ಕೋಟಿ ಮಂದಿ ಮದ್ಯ ಸೇವನೆ ಮಾಡುತ್ತಿದ್ದು, ಶೇ. ೩೦ರಷ್ಟು ಮಂದಿ
ಮಾನಸಿಕ ಸಮಸ್ಯೆಯಿಂದಾಗಿ ಈ ಚಟಕ್ಕೆ ದಾಸರಾಗಿದ್ದಾರೆ. ಮದ್ಯ ಸೇವನೆ ಚಟದಿಂದ ಶೇ. ೨೦-ರಿಂದ ೩೦, ತಂಬಾಕು ಸೇವನೆಯಿಂದ ಶೇ.೮-ರಿಂದ ೧೦ ಮತ್ತು ಗಾಂಜಾ ಸೇವನೆ ಚಟದಿಂದ ಶೇ. ೩-೫ರಷ್ಟು ಮಂದಿ ಹೊರಗೆ ಬರಲು ಸಾಧ್ಯಎಂದರು.
ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಮಾತನಾಡಿ, ಮಾದಕ ದ್ರವ್ಯ
ಜಾಗತಿಕ ಸಮಸ್ಯೆಯಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ. ವಿಶ್ವಸಂಸ್ಥೆಯ ಏಜೆನ್ಸಿ, ಭಾರತದಲ್ಲಿ ನಾರ್ಕೊಟಿಕ್‌ ಕಂಟ್ರೋಲ್‌ ಬ್ಯೂರೋ ಮತ್ತು ಕರ್ನಾಟಕದಲ್ಲಿ ಸಿಐಡಿಯಲ್ಲಿ ಪ್ರತ್ಯೇಕ ವಿಭಾಗ ಮತ್ತು ಪ್ರತಿ ಜಿಲ್ಲೆಯಲ್ಲೂ ಸೆನ್‌ ಅಪರಾಧ ಪೊಲೀಸ್‌ ಠಾಣೆಯನ್ನು ಸ್ಥಾಪಿಸಿ ಈ ಮಾಫಿಯಾದ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಸ್ವಾಗತಿಸಿ, ಡಿವೈಎಸ್ಪಿ ಜೈಶಂಕರ್‌ ವಂದಿಸಿದರು. ಶಿವಾನಂದ ನಾರಿ ಕಾರ್ಯಕ್ರಮ ನಿರೂಪಿಸಿದರು.
Attachments area