ಎಂ. ದಾನಿಶ್ ಅವರ “ಕಾಡಿಗೊಂದು ಕಿಟಕಿ” ಕಾದಂಬರಿ ಬಿಡುಗಡೆ

ಮಂಗಳೂರು: ಕಥೆಗಾರ ಕೇವಲ ಕಥೆಗಾರನಾದರೆ ಸಾಲದು. ಕಥೆಗೆ ತಕ್ಕುದಾದ ಪ್ರಾದೇಶಿಕ ಭಾಷೆ, ಸಂಸ್ಕøತಿಯನ್ನು ಅರಿತುಕೊಂಡು ಅದನ್ನು ತನ್ನ ಬರವಣಿಗೆಯಲ್ಲಿ ಮೈಗೂಡಿಸಿಕೊಳ್ಳುವುದು ಒಂದು ರೀತಿಯ ಕಲೆ ಎಂದು ಖ್ಯಾತ ಲೇಖಕ, ಸಾಹಿತಿ ಯೋಗೇಶ್ ಮಾಸ್ಟರ್ ತಿಳಿಸಿದರು.
ಸಂವೇದನ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ, ಯುವ ಲೇಖಕ ಎಂ. ದಾನೀಶ್ ರವರ ‘ಕಾಡಿಗೊಂದು ಕಿಟಕಿ’ ಕಾದಂಬರಿಯನ್ನು ಝೂಮ್ ಆ್ಯಪ್ ಮೂಲಕ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಕಥೆಯಲ್ಲಿ ಪಾತ್ರಗಳ ನಡುವಿನ ಮಾತುಗಾರಿಕೆ ಮತ್ತು ಆಹಾರಗಳ ವಿವರಣೆಯು ಲೇಖಕನ ಸೂಕ್ಷ್ಮ ಪ್ರಜ್ಞೆಯನ್ನು ಮತ್ತು ಗಮನಿಸುವಿಕೆಯನ್ನು ತೋರಿಸಿಕೊಡುತ್ತದೆ.
ಮನುಷ್ಯನ ವೈಯಕ್ತಿಕ ಬದುಕು ಸಾಮಾಜಿಕ ಬದುಕಿನೊಂದಿಗೆ ಹಾಸು ಹೊಕ್ಕಿದೆ ಎಂಬುವುದನ್ನು ದಾನೀಶ್ ರವರ ಕಾಡಿಗೊಂದು ಕಿಟಕಿಯು ಕಟ್ಟಿಕೊಡುತ್ತದೆ. ಅದೇ ರೀತಿ ಪಾತ್ರಗಳ ನಡುವಿನ ಮಾತುಗಾರಿಕೆಯು ಸ್ಥಳೀಯತೆಯನ್ನು ಪ್ರತಿಬಿಂಬಿಸುವುದಲ್ಲದೇ, ಪ್ರಸ್ತುತ ಬದುಕು ತನ್ನ ಮುಂದಿನ ಪೀಳಿಗೆಗೆ ತೊಡಕಾಗುವುದಾದರೆ ಅದು ಅತ್ಯಂತ ದೊಡ್ಡ ಸ್ವಾರ್ಥಪರತೆ ಎಂಬುವುದು ಕಾದಂಬರಿಯಲ್ಲಿ ಸಾಂಕೇತಿಕವಾಗಿದ್ದು, ಓದುಗರನ್ನು ಓದುವಂತೆ ಮಾಡುತ್ತದೆ ಎಂದು ಯೋಗೇಶ್ ಮಾಸ್ಟರ್ ತಿಳಿಸಿದರು.
ಬಳಿಕ ಮಾತನಾಡಿದ ಪತ್ರಕರ್ತ, ಲೇಖಕ ಏ.ಕೆ. ಕುಕ್ಕಿಲ, ಓರ್ವ ಬರಹಗಾರನಿಗೆ ಬೇಕಿರುವುದು ಸಂಪೂರ್ಣ ಪ್ರೋತ್ಸಾಹ. ಏಕೆಂದರೆ ಈಗ ಸಮಸ್ಯೆ ಇರುವುದು ಬರೆಯುವುದರಲ್ಲಲ್ಲ. ಪ್ರಕಟಿಸುವುದೇ ಒಂದು ಸಮಸ್ಯೆಯಾಗಿದೆ. ಈ ಮಧ್ಯೆ ದಾನೀಶ್ ರವರ ಕಾಡಿಗೊಂದು ಕಿಟಕಿ ಬಿಡುಗಡೆ ಮಾಡುತ್ತಿರುವುದು ಉತ್ತಮ ಕೆಲಸ. ಕಾಡಿನ ಜನರ ಬಗ್ಗೆ ಬಹಳ ನೈಜವಾಗಿ ಕಟ್ಟಿಕೊಟ್ಟು, ಒಂದು ರೀತಿಯ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸಂವೇದನ ಪ್ರಕಾಶನ ಸಂಸ್ಥೆಯ ಈ ಪುಸ್ತಕವನ್ನು 8050101458 ಗೆ ಸಂಪರ್ಕಿಸಿ ತರಿಸಿಕೊಳ್ಳಬಹುದು.