ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ, ಎರಡು ದಿನ ಭಾರೀ ಚಳಿ; ಹವಾಮಾನ ಇಲಾಖೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಈಗಾಗಲೇ ನೆರೆಯ ತಮಿಳುನಾಡಿಗೆ ಭಾರಿ ಮಳೆ ಎಚ್ಚರಿಕೆ ನೀಡಿದ್ದ ಹವಾಮಾನ ಇಲಾಖೆ ಇದೀಗ ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ ಎಂದು ಮಾಹಿತಿ ನೀಡಿದೆ.

ರಾಜ್ಯದ ಹವಾಮಾನದಲ್ಲಿ ಪ್ರತಿದಿನವೂ ಏರುಪೇರು ಉಂಟಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಚಳಿಯ ತೀವ್ರ ಕಡಿಮೆಯಾಗುತ್ತಿದೆ ಎನ್ನುವಾಗಲೇ ಮತ್ತೆ ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೂಡ ಆಗುವ ಸಾಧ್ಯತೆವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜನವರಿ 26ರಿಂದ ಜನವರಿ 28ರವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಈ ಬದಲಾದ ಹವಾಮಾನ ಪರಿಸ್ಥಿತಿ ಮಲೆನಾಡು ಮತ್ತು ಬಯಲು ಸೀಮೆಯ ಜನರಲ್ಲಿ ಆತಂಕ ಮನೆ ಮಾಡಿದೆ, ರಾಜ್ಯದಲ್ಲಿ ಮುಂದಿನ ಎರಡು ದಿನ ತುಂತುರು ಮಳೆ ಜೊತೆಗೆ ಭಾರೀ ಚಳಿಯ ವಾತಾವರಣ ಮುಂದುವರೆಯಲಿದೆ ಎಂದು ಐಎಂಡಿ ಮುನ್ಸೂಚನೆ ಕೊಟ್ಟಿದೆ.

ತಮಿಳುನಾಡಿನಿಂದ ಬಂಗಾಳಕೊಲ್ಲಿಯ ನೈಋುತ್ಯ ಭಾಗದಲ್ಲಿ ಮತ್ತು ಶ್ರೀಲಂಕಾಗೆ ಹೊಂದಿಕೊಂಡಿರುವ ಪೂರ್ವ ದಿಕ್ಕಿನಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ ಇದೀಗ ತನ್ನ ಪಥ ಬದಲಿಸಿದೆ. ಈ ವ್ಯವಸ್ಥೆ ಇದೀಗ ಕೊಮೊರಿನ್ ಪ್ರದೇಶದಿಂದ ಉತ್ತರ ಕೇರಳ ಕರಾವಳಿಯವರೆಗೆ ಅರೇಬಿಯನ್ ಸಮುದ್ರದಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ ಸುಮಾರು 0.9 ಕಿ.ಮೀ ಎತ್ತರದಲ್ಲಿ ಸಕ್ರಿಯವಾಗಿದೆ.

ಉಡುಪಿ,ದ.ಕ. ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ:
ಹವಾಮಾನ ಇಲಾಖೆ ಪ್ರಕಾರ ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಕೊಡಗು, ಹಾಸನ ದಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಿನ್ನೆ ಸಂಜೆ ಸಾಧಾರಣ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಇದೇ ರೀತಿಯ ಮತ್ತೊಂದು ಸುತ್ತಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.