ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಉಡುಪಿ XPRESS ಆಯೋಜಿಸಿದ್ದ LOVEಲಿ ಜೋಡಿ-ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ತೀರ್ಥಹಳ್ಳಿಯ ಸತ್ಯಾನಂದ ಭಟ್ ಮತ್ತು ಸುಧಾ ದಂಪತಿ (ಪ್ರಥಮ) ಉಜಿರೆಯ ಕವನಶ್ರೀ,ವಿಜೇತ್ ಜೋಡಿ (ದ್ವಿತೀಯ) ಸುರತ್ಕಲ್ ನ ಪ್ರಶಾಂತ್ ಕೆ, ರೂಪಶ್ರೀ (ತೃತೀಯ) ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಸಮಾಧಾನಕರ ಬಹುಮಾನಗಳನ್ನು ಮೈಸೂರಿನ ಸಂತೋಷ್, ಖುಷಿ ಮತ್ತು ಹಿರಿಯಡ್ಕದ ಅಜಿತ್ ಶೆಟ್ಟಿ, ಪ್ರೀತಿ ಶೆಟ್ಟಿ ಪಡೆದುಕೊಂಡು ಅದ್ದೂರಿ ಲವ್ಲೀ ಜೋಡಿಗಳಾಗಿ ಮಿಂಚಿದ್ದಾರೆ.
ಹರಿದು ಬಂದ ಜೋಡಿ ಚಿತ್ರಗಳು:
ಪ್ರೀತಿಸಿ ಮದುವೆಯಾದವರು ಮತ್ತು ಮದುವೆಯಾದ ಬಳಿಕ ಮಧುರವಾಗಿ ಪ್ರೀತಿ ಮಾಡುತ್ತ ಬಾಳಿದವರು ಎನ್ನುವ ವಿಷಯದ ಕುರಿತು ಕರಾವಳಿಯ ಸುದ್ದಿ-ಮನೋರಂಜನ ಜಾಲತಾಣ ಉಡುಪಿ XPRESS, LOVE ಲಿ ಜೋಡಿ ಪರಿಕಲ್ಪನೆಯಡಿ ಆಹ್ವಾನಿಸಿದ ಫೋಟೋ ಸ್ಪರ್ಧೆಗೆ ರಾಜ್ಯದೆಲ್ಲಡೆಯಿಂದ ಹಾಗೂ ಹೊರದೇಶದಿಂದ 1,100 ಮಿಕ್ಕಿ ಎಂಟ್ರಿಗಳು ಬಂದಿದ್ದವು. ಎಲ್ಲ ಚಿತ್ರಗಳು ಒಂದಕ್ಕಿಂತಲೂ ಒಂದು ಆಕರ್ಷಕವಾಗಿದ್ದವು. ವಿಭಿನ್ನವಾಗಿದ್ದವು. ಆದರೆ ಕೆಲವೊಂದು ಚಿತ್ರಗಳಲ್ಲಿ ಮಾತ್ರ ಸಹಜತೆ, ಉಲ್ಲಾಸ ಹಾಗೂ ಗಂಡ-ಹೆಂಡತಿಯ ಸಹಜ ಪ್ರೀತಿ- ಹೊಂದಾಣಿಕೆ ಎದ್ದು ಕಾಣುತ್ತಿತ್ತು. ಅಂತಹ ಕೆಲವೊಂದು ಚಿತ್ರಗಳಿಗೆ ತೀರ್ಪುಗಾರರು ಫುಲ್ ವೋಟ್ ನೀಡಿದ್ದಾರೆ. ಫೋಟೋ ಗುಣಮಟ್ಟ, ಅದ್ದೂರಿತನಕ್ಕಿಂತಲೂ ಚಿತ್ರದಲ್ಲಿ ಕಾಣುತ್ತಿದ್ದ ಪ್ರೀತಿ ಹಾಗೂ ಸಹಜತೆಯೇ ಮುಖ್ಯ ಅನ್ನೋದು ತೀರ್ಪುಗಾರರ ಅಭಿಮತ. ಅಂದ ಹಾಗೆ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಚಿತ್ರಗಳನ್ನು ಇಂದು ಪ್ರಕಟಿಸಲಾಗುವುದು
ಬಹುಮಾನಿತರಿಗೆ ನಮ್ಮ ಅಭಿನಂದನೆಗಳು. ಪ್ರೀತಿ ಎಂಬುದು ಜೀವನಪೂರ್ತಿ ಇರಬೇಕಾದ ದೊಡ್ಡದ್ದೊಂದು ಶಕ್ತಿ. ಆ ಪ್ರೀತಿ ಅನ್ನೋ ಶಕ್ತಿ ನಿಮ್ಮ ಬದುಕಿಗೆ, ಸಾಧನೆಗೆ ಸ್ಪೂರ್ತಿಯಾಗಲಿ ಎನ್ನುವುದು ನಮ್ಮ ಹಾರೈಕೆ.
ತೀರ್ಪುಗಾರರು ಹೇಳಿದ್ದೇನು?
ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಿದ ಚಿತ್ರ, ತಾಂತ್ರಿಕವಾಗಿ ಅಷ್ಟು ಚೆನ್ನಾಗಿಲ್ಲದಿದ್ದರೂ, ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಅನ್ನೋದಕ್ಕೆ ಉದಾಹರಣೆಯಾಗಿ ನಿಲ್ಲುವ ಚಿತ್ರ, ಇದು unconditional love .ಜೀವನದ ಪ್ರತೀ ಏಳುಬೀಳುಗಳಲ್ಲೂ ಜೊತೆಯಾಗಿದ್ದವರು ಈ ಅಜ್ಜ-ಅಜ್ಜಿ. ಇವರ ಪ್ರೀತಿಯಲ್ಲೇ ಸಹಜತೆ ಎದ್ದು ಕಾಣುತ್ತಿದೆ. ಎರಡನೇ ಬಹುಮಾನಕ್ಕೆ ಆಯ್ಕೆಯಾದ ಚಿತ್ರದಲ್ಲಿ ಹುಡುಗಿ ನಾಚಿದ್ದಾಳೆ .ಅವಳ ನಾಚಿಕೆ, ಭಾವನೆಗೆ ಸ್ಪಂದಿಸುವಂತೆ ಆ ಹುಡುಗನ ಕಣ್ಣು, ಹಾಗೂ ನಗುವಿದೆ. ಆಕೆಯ ನಾಚಿಕೆಯನ್ನೂ ಮೀರಿಸುವಂತಹ ಕಣ್ಣು ಹಾಗೂ ನಗು ಅವನದ್ದು. ಆ ಕಾರಣಕ್ಕೆ ಈ ಚಿತ್ರ ಆಯ್ಕೆಯಾಗಿದೆ. ಮೂರನೇ ಬಹುಮಾನಕ್ಕೆ ಆಯ್ಕೆಯಾದ ಜೋಡಿಗಳಲ್ಲಿ ಮನದಾಳದ ನಗುವಿತ್ತು. ಜೀವನದ ಅಲೆಗಳಂತೆ ಬದುಕಿನ ಕಷ್ಟ-ಸುಖಗಳನ್ನು ಜೊತೆಯಾಗಿ ಎದುರಿಸುವ ಅಪ್ಪುಗೆಯಿತ್ತು.
*ಅನುಷಾ ಶೈಲಾ-
ಫ್ರೀಲ್ಯಾನ್ಸ್ ಬರಹಗಾರ್ತಿ, ಹವ್ಯಾಸಿ ಛಾಯಾಚಿತ್ರ ಕಲಾವಿದೆ, ಬೆಂಗಳೂರು
——————————————————————————-
# ಅಜ್ಜ-ಅಜ್ಜಿಯ ಚಿತ್ರದಲ್ಲಿ ಸಹಜತೆ ಗಮನ ಸೆಳೆಯುವಂತಿದೆ,ಯಾವುದೇ ಆಡಂಭರ ಇಲ್ಲಿಲ್ಲ, ಪ್ರೀತಿಯೇ ಇಲ್ಲಿ ಮುಖ್ಯವಾಗಿ ಕಾಣುವಂತಿದೆ. ದ್ವಿತೀಯ ಬಹುಮಾನಕ್ಕೆ ಆಯ್ಕೆಯಾದ ಜೋಡಿಗಳಲ್ಲಿ ಅದ್ಬುತವಾಗಿ ಪ್ರೀತಿ ಮತ್ತು ಹೊಂದಾಣಿಕೆ ಇದೆ ಅನ್ನಿಸಿತು.ಅವರು ಫೋಟೋಗೆ ಫೋಸು ಕೊಟ್ಟರೂ, ಅದು ಫೋಸ್ ಕೊಟ್ಟಿದ್ದಲ್ಲ, ಸಹಜವಾಗಿ ಹುಟ್ಟಿಕೊಂಡ ಚಿತ್ರ ಎನ್ನುವಂತೆ ಮೂಡಿಬಂದಿದೆ. ಪ್ರೀತಿಯಲ್ಲಿ , ಸಂಸಾರದಲ್ಲಿ ಹೊಂದಾಣಿಕೆ ತುಂಬಾ ಮುಖ್ಯ, ಆ ಹೊಂದಾಣಿಕೆ ಈ ಚಿತ್ರದಲ್ಲಿದೆ.
_ಪ್ರಿಯಾ ಭಟ್,
ಬರಹಗಾರ್ತಿ, ಕುಮಟ.