ಡೇಟಿಂಗ್ ಹೋಗುವಾಗ ಇಬ್ಬರೂ ಲವ್ ಬರ್ಡ್ಸ್, ಹೊಟೇಲ್ ಬಿಲ್ ಹಂಚಿ ಕೊಳ್ಳುವ ಎಂದದ್ದಕ್ಕೆ ಬ್ರೇಕಪ್: ವೈರಲ್ ಆದ ಬಿಲ್ ಪ್ರೇಮ ಕಹಾನಿ!

ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಡೇಟಿಂಗ್ ಎಂದರೆ ಕೇವಲ ಕಾಫಿ, ಡಿನ್ನರ್ ಅಥವಾ ಔಟಿಂಗ್ ಮಾತ್ರವಲ್ಲ, ಅದು ಈಗ ಸಂಬಂಧಗಳ ಮನಸ್ಥಿತಿ ಪರೀಕ್ಷೆಯಂತಾಗಿದೆ. ಇತ್ತೀಚೆಗೆ ಮುಂಬೈನ ಹೈ-ಪ್ರೊಫೈಲ್ ಮಹಿಳೆಯೊಬ್ಬರ ಡೇಟಿಂಗ್ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಯವರೆಗೆ ಸಾಗಬಹುದೆಂದುಕೊಂಡಿದ್ದ ಸಂಬಂಧ ಕೇವಲ ₹2,500 ಕಾರಣಕ್ಕೆ ಮುರಿದಿದ್ದು ಎಲ್ಲರ ಗಮನ ಸೆಳೆದಿದೆ.

ಮುಂಬೈನಲ್ಲಿ ವಾಸಿಸುವ 36 ವರ್ಷದ ಮಹಿಳೆ ವರ್ಷಕ್ಕೆ ಸುಮಾರು ₹80 ಲಕ್ಷ ಆದಾಯ ಹೊಂದಿದ್ದಾರೆ ಎನ್ನಲಾಗಿದೆ. ಮ್ಯಾಚ್‌ಮೇಕಿಂಗ್ ಸೇವೆಯ ಮೂಲಕ ಅವರು ಒಬ್ಬ ಯುವಕನನ್ನು ಭೇಟಿಯಾಗಿದ್ದರು. ಮೊದಲ ಎರಡು ಭೇಟಿಗಳು ಚೆನ್ನಾಗಿಯೇ ನಡೆದಿದ್ದು, ಆ ವೇಳೆ ಎಲ್ಲ ಖರ್ಚನ್ನೂ ಯುವಕನೇ ಭರಿಸಿದ್ದನು.

ಆದರೆ ಮೂರನೇ ಭೇಟಿಯಲ್ಲೇ ಕಥೆಗೆ ತಿರುವು ಸಿಕ್ಕಿತು. ಆ ದಿನ ಇಬ್ಬರೂ ಊಟಕ್ಕೆ ಹೋಗಿದ್ದಾಗ ಬಿಲ್ ₹5,000 ಬಂದಿತ್ತು. ಆಗ ಯುವಕ, “ಈ ಬಿಲ್ ಅನ್ನು ಅರ್ಧ-ಅರ್ಧವಾಗಿ ಹಂಚಿಕೊಳ್ಳೋಣ” ಎಂದು ಹೇಳಿದ್ದಾನೆ. ಅಂದರೆ ತಲಾ ₹2,500 ಪಾವತಿಸುವಂತೆ ಕೇಳಿದ್ದಾನೆ. ಇದನ್ನು ಕೇಳಿದ ಮಹಿಳೆ ಅಚ್ಚರಿಗೊಂಡು, ಅಲ್ಲೇ ಸಂಬಂಧಕ್ಕೆ ತೆರೆ ಎಳೆದಿದ್ದಾರೆ ಎನ್ನಲಾಗಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಬಣಗಳ ಚರ್ಚೆಗೆ ಕಾರಣವಾಯಿತು. ಮಹಿಳೆಯ ಬೆಂಬಲಿಗರು, “ಆರಂಭದಲ್ಲೇ ಇಷ್ಟೊಂದು ಲೆಕ್ಕಾಚಾರ ಮಾಡಿದರೆ, ಮದುವೆಯಾದ ಬಳಿಕ ಹೇಗಿರಬಹುದು?” ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಯುವಕನ ಪರ ಇರುವವರು, “₹80 ಲಕ್ಷ ಗಳಿಸುವ ಮಹಿಳೆಗೆ ₹2,500 ಪಾವತಿಸಲು ಸಮಸ್ಯೆ ಏಕೆ?” ಎಂದು ಪ್ರತಿಪ್ರಶ್ನೆ ಮಾಡಿದ್ದಾರೆ.

ತಜ್ಞರ ಅಭಿಪ್ರಾಯದಂತೆ, ಇತ್ತೀಚಿನ ಡೇಟಿಂಗ್ ಸಂಸ್ಕೃತಿ ಕೇವಲ ಭೇಟಿಗಳು ಅಥವಾ ಪ್ರೀತಿ ಮಾತ್ರವಲ್ಲ, ಪರಸ್ಪರ ಮನೋಭಾವ, ಮೌಲ್ಯಗಳು ಮತ್ತು ನಿರೀಕ್ಷೆಗಳನ್ನು ಅಳೆಯುವ ವೇದಿಕೆಯಾಗಿದೆ. ಈ ಸಣ್ಣ ಘಟನೆಯೇ ಆಧುನಿಕ ಸಂಬಂಧಗಳಲ್ಲಿ ಹಣದ ವಿಚಾರ ಎಷ್ಟು ದೊಡ್ಡ ಪಾತ್ರ ವಹಿಸುತ್ತಿದೆ ಎಂಬುದನ್ನು ತೋರಿಸಿದೆ.