ಟಿ. ದೇವಿದಾಸ್
ಸ್ವಾತಂತ್ರ್ಯವೆಂಬುದು ದೇಹಕ್ಕೆ ಸಂಬಂಧಿಸಿದ್ದಾ? ಮನಸಿಗೆ ಸಂಬಂಧಿಸಿದ್ದಾ? ಬುದ್ಧಿಗೆ ಸಂಬಂಧಿಸಿದ್ದಾ? ಅರೆ, ಇದೆಂಥಾ ವಿಚಿತ್ರವಾದ ಪ್ರಶ್ನೆ. ಅಷ್ಟಕ್ಕೂ ಸ್ವಾತಂತ್ರ್ಯವೆಂಬುದು ದೇಹಕ್ಕೆ, ಮನಸಿಗೆ ಸಂಬಂಧಿಸಿದ್ದೇ? ಅಹುದು, ಸ್ವಾತಂತ್ರ್ಯವೆಂಬುದು ದೇಹ ಮತ್ತು ಮನಸು ಎರಡಕ್ಕೂ ಸಂಬಂಧಿಸಿದ್ದು. ದೇಹಕ್ಕೆ ನಾವೇ ಹಾಕಿಕೊಂಡ ಬಂಧನವೂ ಸ್ವಾತಂತ್ರ್ಯ ಎನಿಸಿಬಿಡುತ್ತದೆ. ಆಹಾರ-ವಿಹಾರ, ಉಡುಗೆ-ತೊಡುಗೆಗಳಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದರೂ ನಮಗೆ ನಾವೇ ಬೇಲಿಗಳನ್ನು ಹಾಕಿಕೊಂಡಿದ್ದೇವೆ. ಮನಸಿಗೂ ಅಂದರೆ ನಮ್ಮ ಮಾತು, ನಗು, ಚಿಂತನೆ, ಅಭಿವ್ಯಕ್ತಿಗಳಲ್ಲಿ ಮಿತಿಗಳನ್ನು ಹಾಕಿಕೊಂಡು ಬದುಕುತ್ತಿದ್ದೇವೆ. ಒಟ್ಟಲ್ಲಿ, ಸ್ವಾತಂತ್ರ್ಯವೆಂದರೆ ನಾವೇ ಹಾಕಿಕೊಂಡ ನಿಯಮಗಳಿಗೆ ನಿಷ್ಠರಾಗಿ ನಾವೇ ಬದುಕುವುದು. ಅಂದರೆ ನಮ್ಮನ್ನು ನಾವೇ ಆಳಿಕೊಳ್ಳುವುದು. ಅನ್ಯರು ನಡೆಸುವ ಪಾರತಂತ್ರ್ಯ ಸ್ವಾತಂತ್ರ್ಯವಾಗುವುದಿಲ್ಲ. ಆದರೆ, ಅನ್ಯರ ಬಂಧನದಲ್ಲೂ ಹಿತವೆನಿಸಿದರೆ ಅದೂ ಸ್ವಾತಂತ್ರ್ಯವೆನಿಸುತ್ತದೆ. ಅದರರ್ಥ ಪಾರತಂತ್ರ್ಯವೂ ಆಂತರ್ಯದಲ್ಲಿ ಸ್ವಾತಂತ್ರ್ಯವಾಗೇ ಇರುತ್ತದೆ.
ಹೇಗೆ ವೈಫಲ್ಯವೂ ಸಾಫಲ್ಯವೋ, ಹಾಗೆ! ದೇಹ, ಮನಸ್ಸು, ಮನೆ, ಮದುವೆ, ಕುಟುಂಬ, ಶಾಲೆ, ಸಮಾಜ, ರಾಜ್ಯ, ದೇಶ, ಕಾನೂನು-ಇವೆಲ್ಲವೂ ಸ್ವಚ್ಛಂದಕ್ಕೆ ಬಂಧಗಳೆನಿಸಿಯೂ ಸ್ವಾತಂತ್ರ್ಯವೆನಿಸಿದೆ. ಹಾಗಾದರೆ ಸ್ವಾತಂತ್ರ್ಯವೆಂಬುದು ದೈಹಿಕ ಮತ್ತು ಮಾನಸಿಕ ಕ್ರಿಯೆಗೆ ಸಂಬಂಧಿಸಿದ್ದು ಅಂತಾಯ್ತು. ನಮ್ಮ ನಮ್ಮ ಬದುಕಿನ ಕಟ್ಟಳೆಗಳಿಗೆ, ಭಾವನೆಗಳಿಗೆ, ಆಸೆಗಳಿಗೆ, ನಂಬಿಕೆಗಳಿಗೆ ನಾವು ಬಂಧಿಯಾದರೂ ಅವುಗಳಿಂದ ಹೊರಬರಲು ಪ್ರಯತ್ನಿಸುವುದಿಲ್ಲ, ಇಷ್ಟಪಡುವುದಿಲ್ಲ. ಯಾಕೆಂದರೆ ಅವು ನಾವಿಷ್ಟ ಪಟ್ಟು ರೂಢಿಸಿಕೊಂಡ ಸ್ವಾತಂತ್ರ್ಯವೆಂಬ ಬಂಧನ! ಪಂಚೇಂದ್ರಿಯಗಳಿಗೆ, ಕರ್ಮೇಂದ್ರಿಯಗಳಿಗೆ ಒಳಪಟ್ಟು ಅದರ ನಿಯಂತ್ರಣದಲ್ಲೇ ಜೀವಿಸುತ್ತೇವೆ. ಇನ್ನೊಬ್ಬರ ಅಧೀನದಲ್ಲಿ ಇರುವುದೂ ನಮ್ಮ Self Dependence ಆದ ಸ್ವಾತಂತ್ರ್ಯವೆಂದು ಭಾವಿಸುತ್ತೇವೆ. ಅಂದರೆ ನಮ್ಮ ಸುತ್ತಲೂ ಸದಾ ಒಂದು ಆವರಣ ಇರಲೇಬೇಕೆಂದು ಬಯಸುವ, ಆ ಮೂಲಕ ಒಂದು ನಿಯಂತ್ರಣ ಜಾಗ್ರತವಾಗಿರುವಂತೆ ಎಚ್ಚರದಿಂದ ಕಟ್ಟಿಕೊಂಡ ಈ ಬದುಕೂ ಹಲವು ಬಂಧನಗಳಲ್ಲಿ ಇರುವುದಕ್ಕೇ ಬಯಸುತ್ತದೆ. ಹೀಗೆ ನಾವು ಬಯಸುವ ಆವರಣಗಳು ನಮಗೆ ಸೆರೆಯಾಗಬಾರದೆಂಬ ಎಚ್ಚರವನ್ನು ವಹಿಸುತ್ತೇವೆ. ಆದರೆ, ವಾಸ್ತವದಲ್ಲಿ ಅವು ಸೆರೆಯೇ ಆಗಿರುತ್ತವೆ. ಅಂಥ ಸೆರೆಗಳು ಬದುಕನ್ನು ಎಲ್ಲ ಬಗೆಯ ಅದ್ವಾನಗಳಿಂದ ಕಾಪಿಡುತ್ತವೆ.
ಬ್ರಿಟಿಷರು ನಮ್ಮನ್ನಾಳುವಾಗ ನಮ್ಮ ನಿತ್ಯ ಬದುಕಿನ ಅಸ್ತಿತ್ವಕ್ಕೆ ಧಕ್ಕೆಯಿಲ್ಲದಿದ್ದಾಗ ಆಗಲೂ ಅದು ನಮಗೆ ಸ್ವಾತಂತ್ರ್ಯವೆನಿಸಿತ್ತು. ಅವರು ಈ ದೇಶವನ್ನು ಬಿಟ್ಟು ಹೋದಮೇಲೂ ಅವರು ರೂಢಿಸಿದಂತೆ ನಾವೀಗ ಬದುಕುವಾಗಲೂ ಆವತ್ತಿಗೂ ಇವತ್ತಿಗೂ ನಮಗೆ ನಮ್ಮ ಸ್ವಾತಂತ್ರ್ಯದ ಅರ್ಥದಲ್ಲಿ ಅಂಥಾದ್ದೇನೂ ವ್ಯತ್ಯಯ ಕ್ಕಾಣಿಸುವುದಿಲ್ಲ. ಈಗಲೂ ಅವರ ಭಾಷೆಯಲ್ಲೇ ನಾವದನ್ನು ಗುರುತಿಸಿಕೊಳ್ಳುತ್ತಿದ್ದೇವೆ.
ರಾಜಪ್ರಭುತ್ವದಲ್ಲೂ ನಮ್ಮ ಪೂರ್ವಿಕರು ಸ್ವಾತಂತ್ರ್ಯವನ್ನು ಅನುಭವಿಸಿದವರು. ನಮ್ಮನ್ನು ನಾವು ಆಳಿಕೊಳ್ಳುವುದು ಅಸಾಧ್ಯವಾದಾಗ ಅನ್ಯವೆನಿಸಿದರೂ ನಮ್ಮದ್ದೇ ಆದ ಪ್ರಭುತ್ತ್ವವೊಂದು ನಮ್ಮನ್ನಾಳುವ ಹಾಗೆ ಮಾಡಿ ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ. ಅಂದರೆ ನಮ್ಮನ್ನು ಬಾಹ್ಯಶಕ್ತಿಯೊಂದು ಆಳುತ್ತಲೇ ಇರಬೇಕೆಂಬ ಮೂಲಭೂತವಾದ ಗಾಢಪ್ರಜ್ಞೆಯೊಂದು ಬದುಕಿನುದ್ದಕ್ಕೂ ಆವರಿಸಿರುವುದರಿಂದ ಸ್ವಾತಂತ್ರ್ಯದ ಪರಿಕಲ್ಪನೆ ನಮ್ಮ ಪಾಲಿಗೆ ಬೇರೆಯದೇ ಆದ ರೂಪದಲ್ಲಿ ಅರ್ಥವಾದಂತಿಲ್ಲ. ದೇವರ ಕೃಪೆಗೆ ನಾವು ಪಾತ್ರರಾಗಬೇಕೆಂಬ ಆಸೆಯೂ ಕೂಡ ಪಾರತಂತ್ರ್ಯದೊಳಗೆ ಅನುಭವಿಸುವ ಸ್ವಾತಂತ್ರ್ಯವೇ ಅಹುದು.
ರಾಜನ ಪ್ರೀತಿ ವಿಶ್ವಾಸಕ್ಕೆ ಹಾತೊರೆಯುವ ನಾವು ಸ್ವಾತಂತ್ರ್ಯವನ್ನು ಅವನ ಅಧೀನದಲ್ಲಿ ಕಾಣಬಯಸುತ್ತೇವೆ. ಹೇಗೆಂದರೆ, ತಾಯಿಯ ಬಂಧನದಲ್ಲೇ ಮಗು ಬಯಸುವ ಸ್ವಾತಂತ್ರ್ಯದಂತೆ. ಈಗ ಪ್ರಜಾಪ್ರಭುತ್ವ ಬಂದಿದೆ. ಆದರೂ ಆಳಿಸಿಕೊಳ್ಳುವ ಬಯಕೆ ಈಡೇರಿದಂತಿಲ್ಲ. ಅದಕ್ಕಾಗಿ ನಮ್ಮವರಿಂದಲೇ ರಚಿತವಾದ ಸರ್ಕಾರವೆಂಬ ವ್ಯವಸ್ಥೆಯಡಿಯಲ್ಲಿ ನಾವು ಸ್ವಾತಂತ್ರ್ಯ ಹೊಂದಿದವರಾಗಿ ಬದುಕುತ್ತಿದ್ದೇವೆ.
ಬ್ರಿಟಿಷರ ಪಾರತಂತ್ರ್ಯವೂ ನಮಗೆ ಅಸಹ್ಯವಾಗಿ ಹೀನವಾಗಿ ಸ್ವಾತ್ಮಾಭಿಮಾನಕ್ಕೆ ಕುಂದಾಗಿ ದಶಕಗಳ ನಿರಂತರ ಹೋರಾಟ ನಡೆಸಿ ಬಲಿದಾನ ಗೈದು ನಮ್ಮವರು ಜಯಿಸಿಕೊಟ್ಟ ಸ್ವಾತಂತ್ರ್ಯದಲ್ಲಿ ನಾವಿಂದು ಬಯಸಿದಂತೆ ಬದುಕುವ ಸ್ವೇಚ್ಛೆಯೂ ಅಲ್ಲದ ನಮ್ಮವರಲ್ಲದ ಹೊರಗಿನ ಯಾವ ಶಕ್ತಿಯೂ ನಮ್ಮನ್ನು ನಿಯಂತ್ರಿಸದಂತೆ ನಾವೇ ಹೆಣೆದುಕೊಂಡ ಬಂಧನಗಳಿಂದ ಸ್ವತಂತ್ರರಾಗಿ ಬದುಕುತ್ತಿದ್ದೇವೆ. ಇದು ಕೊಡುವ ಸುಖ-ದುಃಖಕ್ಕೆ ಒಪ್ಪಿದ್ದೇವೆ; ಒಗ್ಗಿದ್ದೇವೆ. ನಮ್ಮವರೇ ನಮ್ಮನ್ನು ಆಳುತ್ತಾರೆ ಎಂಬಲ್ಲಿಗೆ ಅದು ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಬಲಹೀನತೆಯಾಗಿ ಕಂಡರೂ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದೇವೆ ಅಂದುಕೊಂಡಿದ್ದೇವೆ. ಯಾಕೆಂದರೆ ಅದು ನಾವು ನಮ್ಮನ್ನು ಹದ್ದುಬಸ್ತಿನೊಳಗೆ ಇರುವಂತೆ ಕಟ್ಟಿಕೊಂಡ ಪ್ರೀತಿಯ ಬಂಧನ.
ನಮ್ಮೊಳಗಿರುವ ಕಂದಕಗಳನ್ನು ಹೋಗಲಾಡಿಸಲು ಅವ್ಯಾಹತವಾಗಿ ಪ್ರಯತ್ನಿಸುತ್ತಾ ಅದೆಷ್ಟೋ ಸಂಘರ್ಷಗಳನ್ನು ಎದುರಿಸಿಯೂ ಒಗ್ಗಟ್ಟನ್ನು ಕಾಣಲಾರದೆ ಕಂಡೆವು ಎಂದು ಬದುಕುತ್ತಿರುವ ನಮಗೆ ಸ್ವಾತಂತ್ರ್ಯವೆಂದರೆ ಒಳಾರ್ಥದಲ್ಲಿ ಪಾರತಂತ್ರ್ಯವೂ ಆಗಿದೆಯೆಂದು ಅಷ್ಟು ಸುಲಭವಾಗಿ ಅರ್ಥವಾಗಲಾರದು. ನಮ್ಮೊಳಗಿನ ಎಲ್ಲ ಬಗೆಯ ಅಪಸವ್ಯಗಳು ನಮಗೆ ಮುದವನ್ನೋ ನೋವನ್ನೋ ಕೊಟ್ಟರೂ ನಮ್ಮ ಸ್ವಾತಂತ್ರ್ಯವೆಂಬ ಪರಿಭಾಷೆಯ ವ್ಯಾಪ್ತಿಯಡಿಯಲ್ಲಿ ಅದು ನಮಗೆ ಒಪ್ಪಿತವಾಗಿದೆ. ಈ ಒಪ್ಪಿತವೂ ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾರದೆಂದು ನಂಬಿದ್ದೇವೆ. ನಾವೇ ರಚಿಸಿಕೊಂಡ ಪ್ರಭುತ್ತ್ವದೊಂದಿಗೆ ನಿತ್ಯವೂ ಗುದ್ದಾಡುತ್ತಾ ಬದುಕುವ ನಮಗೆ ಅದನ್ನು ಬಿಟ್ಟು ಬದುಕಲು ಅಸಾಧ್ಯವೆನಿಸಿದೆ. ಅದರೊಂದಿಗಿನ ಬದುಕಲ್ಲೇ ತೃಪ್ತಿಯನ್ನು ಕಾಣುತ್ತಿದ್ದೇವೆ. ನಾವೇ ರೂಪಿಸಿಕೊಂಡ ಈ ಬಂಧನದೊಳಗೆ ಬದುಕುವುದು ನಮಗೆ ಸ್ವಾತಂತ್ರ್ಯವೆಂದು ಈ ಹಿನ್ನೆಲೆಯಲ್ಲಿ ಪರಿಗಣಿತವಾದರೆ, ರಾಜಕೀಯ ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ದಕ್ಕಿಸಿಕೊಂಡು ನಮ್ಮನ್ನು ನಾವೇ ಆಳಿಕೊಳ್ಳುತ್ತಾ ಬಂದಿರುವ ಈ ಸ್ವಾತಂತ್ರ್ಯಕ್ಕೆ ಈಗ ಎಪ್ಪತ್ಮೂರರ ಸಂಭ್ರಮ.
ಮಾನವನ ಇತಿಹಾಸವೆಂದರೆ ಸ್ವಾತಂತ್ರ್ಯ ಪ್ರಾಪ್ತಿಯ ಇತಿಹಾಸ ಎಂಬ ಮಾತಿದೆ. ಇಂಥ ಸ್ವಾತಂತ್ರ್ಯಕ್ಕಾಗಿ ಸಾಕ್ರಟೀಸ್ ವಿಷ ಕುಡಿದ. ಏಸು ಬಲಿದಾನಗೈದ. ಮಾರ್ಟಿನ್ ಲೂಥರ್ ಕಿಂಗ್, ಕ್ಯಾಲ್ವಿನ್ ನಂಥ ಧರ್ಮಗುರುಗಳು ಪ್ರಾಣ ತೆತ್ತರು. ಜಗತ್ತಿನ ಬಹುಪಾಲು ರಾಷ್ಟ್ರಗಳಲ್ಲಿ ಇದಕ್ಕಾಗಿ ಜೀವಗಳು ಉರುಳಿದವು. ಜ್ಞಾನೇಶ್ವರ, ತುಕಾರಾಮ, ರಾಮದಾಸ, ತುಲಸೀದಾಸ, ಗುರುನಾನಕ್ ಮುಂತಾದವರು ದುಡಿದುಡಿದು ಅಮರರಾದರು. ಶಿವಾಜಿಯಂತೂ ತುಳಜಾ ಭವಾನಿಯ ಉಪಾಸನೆಗೈದು ಎದೆಯೊಡ್ಡಿ ಸೆಣೆಸಿದ. ೧೮೫೭ ರಲ್ಲಿ ಮಂಗಲಪಾಂಡೆ, ನಾನಾ ಸಾಹೇಬ, ತಾಂತ್ಯಾಟೋಪಿ, ಲಕ್ಷ್ಮೀಬಾಯಿ, ಕುವರ ಸಿಂಹರಿಂದ ಆರಂಭವಾದ ಈ ಪ್ರಕ್ರಿಯೆಯು ನಿರಂತರ ೯೦ ವರ್ಷಗಳವರೆಗೆ ನಡೆಯಿತು. ತಿಲಕರು, ಗಾಂಧಿಯೇ ಮುಂತಾದ ಮಹಾನ್ ನಾಯಕರು ತಾಯಿ ಭಾರತಿಯ ಚರಣಗಳಿಗೆ ತಮ್ಮ ಜೀವನವನ್ನು ಅರ್ಪಿಸಿಕೊಂಡರು. ಭಗತ್ ಸಿಂಗ್, ರಾಜಗುರು, ಸುಖದೇವ್, ಧಿಂಗ್ರಾ, ಅಲ್ಲೂರಿಯಂಥ ಯವ್ವನದ ಹೊಸ್ತಿಲಲ್ಲಿ ಇರುವವರಿಗೆ ಫಾಸೀ ಆಯಿತು. ಸಾವರ್ಕರ್ ಅಂಥ ಧೀಮಂತ ನಾಯಕರು ದೇಹವನ್ನು ದೇಶಕ್ಕಾಗಿ ಮುಡಿಪಾಗಿಟ್ಟರು. ಪರಮಹಂಸ, ವಿವೇಕಾನಂದರಂಥ ಸಂನ್ಯಾಸಿಗಳ ದಂಡೇ ಈ ಯಜ್ಞದಲ್ಲಿ ಹವಿಸ್ಸಿನಂತೆ ಜೀವ ಸಮರ್ಪಣೆ ಗೈದಿದ್ದಾರೆ. ಈ ಪುಣ್ಯಕಾರ್ಯದಲ್ಲಿ ಜೀವನ ಸವೆಸಿದವರ ಪ್ರಯತ್ನದ ಫಲವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇಲ್ಲಿಂದ ಹೋಗಬೇಕಾದವರು ಹೋಗಿ ೭೨ ವರ್ಷಗಳಾಯಿತು.
ಈಗ ನಮಗೇ ನಾವೇ. ವೈಯಕ್ತಿಕ ಮತ್ತು ಸಾಮಾಜಿಕ ಜೀವನಕ್ಕೆ ಬೇಕಾದ ಸಂಹಿತೆಗಳನ್ನು ಅಳವಡಿಸಿಕೊಂಡು ಬದುಕುತ್ತಿದ್ದೇವೆ. ನಮ್ಮದೇ ಆದ ಸಂವಿಧಾನ ನಮಗಿದೆ. ಕಾಯ್ದೆ ಕಾನೂನುಗಳಿವೆ. ನೀತಿ ನಿಯಮಗಳಿವೆ. ಸರ್ಕಾರವಿದೆ. ಇವೆಲ್ಲಕ್ಕೂ ಇತಿಹಾಸವಿದೆ. ನಮ್ಮನ್ನು ನಾವು ಆಳಿಕೊಳ್ಳುತ್ತೇವೆಂಬ ಅರ್ಥದಲ್ಲೂ ನಾವು ನಿಗದಿ ಮಾಡಿಕೊಂಡ ಕ್ರಮ ಮತ್ತು ಪದ್ಧತಿಯನ್ನು ಮೀರಲಾರೆವು. ಹೀಗೆ, ವೈಚಾರಿಕ ಸಾಮರ್ಥ್ಯದ ಅರಿವಿನಲ್ಲಿ ಸ್ವಾತಂತ್ರ್ಯವೆಂದರೆ ಆತ್ಮಾನುಸಂಧಾನದಂತೆ ಎಂದು ಬದುಕು ಸಾಗಿಸುತ್ತಾ ಬಂದವರು ನಾವು. ಸ್ವ ಮತ್ತು ತಂತ್ರ ಎಂಬೆರಡು ಪದಗಳ ಸಂಯೋಜನೆಯ ಭಾವವೇ ಸ್ವಾತಂತ್ರ್ಯ. ಸ್ವ ಅಂದರೆ ಅಸ್ಮಿತೆ. ಅದು ಕರ್ತೃತ್ವ ಶಕ್ತಿಯ ಮೂಲಾಧಾರವಾದರೆ, ತಂತ್ರವೆಂದರೆ ಮಿತಿಗೆ ಹೇತುವಾಗುತ್ತದೆ. ಅಂದರೆ ಸ್ವಾತ್ಮಾಭಿವ್ಯಕ್ತಿಯ ಸಂಪೂರ್ಣ ಅನಾವರಣ. ನಮ್ಮ ವೈಚಾರಿಕ ನಿಯಮಗಳ ಪಾಲನೆ ಮತ್ತು ಪೋಷಣೆ. ಮನುಷ್ಯ ಬದುಕಿನ ಒಟ್ಟೂ ಬಯಕೆಯ ಮಿತಿಯೇ ಪಾರತಂತ್ರ್ಯವನ್ನು ಬಯಸುವುದಾದ್ದರಿಂದ ಸ್ವಾತಂತ್ರ್ಯವೆಂದರೆ ಪ್ರೀತಿಯ ಬಂಧನ. ಹೆಚ್ಚು ಹೆಚ್ಚು ಬಂಧನ. ನಾವೇ ಹಾಕಿಕೊಂಡ ಒಲುಮೆಯ ಬಂಧನ. ನಮ್ಮಿಚ್ಛೆಯಂತೆ ನಾವು ಮಾಡುವ ಕೆಲಸ, ಉದ್ಯೋಗ, ಶ್ರಮ. ನಮ್ಮ ಶರೀರ, ಮನಸ್ಸು, ಇಂದ್ರಿಯಗಳನ್ನು ನಾವೇ ರಚಿಸಿಕೊಂಡ ನಿಯಮಗಳಿಗೆ ಅನುಸಾರವಾಗಿ ಬಗ್ಗಿಸುವುದು, ಬಾಗಿಸುವುದು, ಬಾಳಿಸುವುದು. ನೆಮ್ಮದಿ, ಸಂತೋಷವನ್ನು ಕಾಣುವುದು.
ಆದರೆ, ವರ್ತಮಾನದಲ್ಲಿ ಸ್ವಾತಂತ್ರ್ಯವೆಂಬುದು ಲೇವಡಿಯಾಗುತ್ತಿದೆ. ದುರುಪಯೋಗ ಆಗುತ್ತಿದೆ. ತಪ್ಪಾಗಿ ಅರ್ಥೈಸಲಾಗುತ್ತಿದೆ. ಅತಂತ್ರ, ಕುತಂತ್ರವಾಗಿ ಕಾಣುತ್ತಿದೆ. ಸ್ವರಾಜ್ಯವಾಗದೆ ಸ್ವೈರಾಚಾರದ ಮೆರವಣಿಗೆಯಾಗಿದೆ. ಇದು ದುರಂತ ವಾಸ್ತವ ಕೂಡ. ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛೆ, ಆತ್ಮಘಾತುಕ ಪ್ರವೃತ್ತಿ ಹೆಚ್ಚುತ್ತಿದೆ. ನಾಗರಿಕ ಸಮಾಜ ಶಿಸ್ತುಗೇಡಿಯಾಗಿದೆ. ಅಸಂಸ್ಕೃತಿ ಅನಾಗರಿಕತೆ ಎಲ್ಲೆಡೆ ಕುಣಿದಾಡುತ್ತಿದೆ. ಅಂತರಂಗದಲ್ಲಿರುವ ಸ್ವಾತಂತ್ರ್ಯ ದೈವಾಧೀನವಾದರೆ, ಬಹಿರಂಗದ ಸ್ವಾತಂತ್ರ್ಯ ಲೌಕಿಕ ಪ್ರಪಂಚದ ನಿಯಮಗಳ ನಿಯಂತ್ರಣಾಧೀನ. ಯಾವ ಸ್ವ-ತಂತ್ರ ಕರ್ತೃತ್ವವೂ ಇಲ್ಲದ ಮನುಷ್ಯನ ಸಮಗ್ರ ಬದುಕು ಸೃಷ್ಟಿಯ ಪಾರತಂತ್ರ್ಯದಲ್ಲೇ ಚಲಿಸುತ್ತದೆ. ಸ್ವಾತಂತ್ರ್ಯವೆಂಬುದು ದೇವರು ಕೊಟ್ಟ ಅದ್ಭುತ ಕೊಡುಗೆ. “ಭಾಗ್ಯದಿಂದ ಲಭಿಸಿತು, ಕರ್ಮದಿಂದ ಕಳೆಯಿತು” ಎಂಬ ತೆರದಿ ಆಗದಂತೆ ಸ್ವಾತಂತ್ರ್ಯವನ್ನು ಅನುಭವಿಸಬೇಕೆಂಬ ಎಚ್ಚರವನ್ನು ಹೊಂದಬೇಕಿದೆ. ನಿಯಮರಹಿತ ಬದುಕು ಬದುಕಲ್ಲ. ಬಂಧನದೊಳಗಿನ ಬದುಕೇ ನಿಜವಾದ ಬದುಕು. ಅದುವೇ ನಿಜವಾದ ಸ್ವಾತಂತ್ರ್ಯ.
ಹೌದು, ಎಲ್ಲ ದೃಷ್ಟಿಯಿಂದಲೂ ನಾವು ಸ್ವತಂತ್ರರು: ಕನ್ನಡವನ್ನು ಬಿಟ್ಟು ಪರಂಗಿಗಳ ಇಂಗ್ಲಿಷನ್ನು ಮಾತನಾಡುತ್ತಾ ನಮ್ಮ ಭಾಷೆಯನ್ನೂ ಸಾಯಿಸಿ, ಇಂಗ್ಲಿಷನ್ನು ಬೆಳೆಸುವುದಕ್ಕೆ; ಮತ್ತೊಬ್ಬರ ಕೈಕೆಳಗೆ ದುಡಿಯುವುದರಲ್ಲೇ ಆನಂದ ಪಡುವುದಕ್ಕೆ; ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ಮರೆಸಿ ವಿದೇಶೀ ಸಂಸ್ಕೃತಿಯನ್ನು ಮೆರೆಸುವುದಕ್ಕೆ; ಜಾತ್ಯತೀತವೆನ್ನುತ್ತಲೇ ಜಾತೀಯತೆಯನ್ನು ಬೆಳೆಸುತ್ತಾ ರಾಜಕೀಯ ದೊಂಬರಾಟ ಮಾಡುವುದಕ್ಕೆ; ನಮ್ಮ ಹೆಂಗಳೆಯರ ಮಾನ-ಅಭಿಮಾನ ಕಳೆಯುವುದಕ್ಕೆ; ನಿರುದ್ಯೋಗವನ್ನೇ ಉದ್ಯೋಗವೆನ್ನುವುದಕ್ಕೆ; ನಾವೇ ಆರಿಸಿ ಕಳಿಸಿದ ನಾಯಕನನ್ನು ಜಗತ್ತು ಕೇಳುವಂತೆ, ನೋಡುವಂತೆ ನಿಂದಿಸುವುದಕ್ಕೆ; ದೇಶದ ಬಗ್ಗೆ ಒಂಚೂರು ತಲೆಬಿಸಿ ಮಾಡಿಕೊಳ್ಳದೆ ದೇಶದ್ರೋಹದ ಕಾರ್ಯವೆಸಗುವುದಕ್ಕೆ; ಯಾರದ್ದೋ ಕೆಲಸವನ್ನು ಗುಲಾಮರಂತೆ ಮಾಡುತ್ತಾ ನಮ್ಮತನವನ್ನು ಮೆರೆಯುವುದಕ್ಕೆ; ಹೆತ್ತವರನ್ನು ಗೋಳು ಹೊಯ್ದುಕೊಳ್ಳುವುದಕ್ಕೆ; ಅಂತರಂಗದಲ್ಲಿ ಒಂಥರ, ಬಹಿರಂಗದಲ್ಲಿ ಇನ್ನೊಂದು ಥರದ ಬದುಕನ್ನು ಬಾಳುವುದಕ್ಕೆ; ಸತ್ಯವನ್ನು ಮರೆಮಾಚಿ ಸುಳ್ಳನ್ನೇ ಎತ್ತಿಹಿಡಿಯುವುದಕ್ಕೆ; ಜಾತಿ, ಮತ, ಧರ್ಮಗಳ ಸೋಗಲಾಡಿತನದಲ್ಲಿ ಕುತಂತ್ರ ಹೆಣೆಯುವುದಕ್ಕೆ; ಯಾವ ಆತ್ಮಶುದ್ಧಿಯೂ ಇಲ್ಲದೆ ಶುದ್ಧತೆಯ ಮಾತನಾಡುವುದಕ್ಕೆ; ಗೊತ್ತಿಲ್ಲದ ವಿಚಾರಗಳಲ್ಲಿ ಎಲ್ಲವೂ ಗೊತ್ತಿದೆಯೆಂಬಂತೆ ಸುಳ್ಳು ಸೃಷ್ಟಿಸುವುದಕ್ಕೆ; ಭ್ರಷ್ಟಾಚಾರ ಮಾಡುತ್ತಲೇ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತನಾಡುವುದಕ್ಕೆ; ಪರೀಕ್ಷೆಯಲ್ಲಿ ನಕಲು ಮಾಡಿ ಅತ್ಯುತ್ತಮ ಶ್ರೇಣಿಯನ್ನು ಪಡೆಯುವುದಕ್ಕೆ;
ಅನ್ನ ಕೊಟ್ಟ ಯಜಮಾನನಿಗೆ ಅನ್ನದ್ರೋಹವೆಸಗುವುದಕ್ಕೆ; ಭಾರತಮಾತೆಯ ಘನತೆಯನ್ನು ಮಣ್ಣುಪಾಲು ಮಾಡುವುದಕ್ಕೆ; ನ್ಯಾಯವನ್ನು ಸೋಲಿಸಿ ಅನ್ಯಾಯದ ಪರ ದನಿಯನ್ನು ಎತ್ತರಿಸುವುದಕ್ಕೆ; ಸರ್ಕಾರದ ದುಡ್ಡಿನಲ್ಲಿ ಕುಟುಂಬ ಸಮೇತ ಮಜಾ ಮಸ್ತಿ ಮೋಜು ಮಾಡುವುದಕ್ಕೆ; ಓಟು ಕೊಟ್ಟವರಿಗೆ ಮಂಗ ಮಾಡಲು; ಹೊನ್ನ ವೇಷವ ತೊಟ್ಟು ಮಣ್ಣು ತಿನ್ನುವ ಕೆಲಸ ಮಾಡಲು; ದೇವರ ಮುಂದೆ ನಿಂತು ಅನ್ಯಾನ್ಯ ವಿಷಯಗಳಲ್ಲಿ ರಕ್ತಿಯಾಗಿ ಬೂಟಾಟಿಕೆಯ ಭಕ್ತಿಯನ್ನು ಪ್ರದರ್ಶಿಸಲು; ಹಣ, ಹೆಂಡವನ್ನು ಹಂಚಿ ಚುನಾವಣೆಯಲ್ಲಿ ಗೆದ್ದು ಬರಲು; ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡಲು; ಅಧರ್ಮಿಗಳಾಗಿ ಧರ್ಮದ ಬಗ್ಗೆ ಪುಂಖಾನುಪುಂಖವಾಗಿ ಪುಂಗಿಯೂದಲು; ಯಾರದೋ ಹೆಸರಿನಲ್ಲಿ ಹೆಸರು, ಪದವಿ, ಅಂತಸ್ತು, ಸ್ಥಾನಮಾನ ಹೊಡೆದುಕೊಳ್ಳಲು; ಕೂಲಿಯನ್ನು ಕೊಡದೆ ಬಡವರನ್ನು ದುಡಿಸಿಕೊಳ್ಳುವುದಕ್ಕೆ; ನಾವೇ ಸರಿಯಿಲ್ಲದೆ ಅನ್ಯರನ್ನು ಸರಿಮಾಡುವುದಕ್ಕೆ; ಇನ್ನೂ ಏನೇನೋ ಅಲ್ಲಸಲ್ಲದ ಕಾರ್ಯಗಳನ್ನು ಮಾಡುತ್ತಲೇ ಇರುವುದಕ್ಕೆ.
ಭಾರತದ ಬಹುತ್ವವೇ ನಿಜವಾದ ಏಕತ್ವ
ಹೇಗೆ ಹೇಳಲು ಸಾಧ್ಯ ನಾವು ಸ್ವತಂತ್ರರಲ್ಲವೆಂದು? ನಮಗೆ ಸ್ವಾತಂತ್ರ್ಯ ಬಂದಿಲ್ಲವೆಂದು? ಜಮ್ಮು ಕಾಶ್ಮೀರದ ವಿಚಾರವಾಗಿ ಐತಿಹಾಸಿಕವಾದ ಮೈಲಿಗಲ್ಲೇ ಸೃಷ್ಟಿಸಿ ಒಂದು ಜನಾಂಗವನ್ನೇ ಸಮಗ್ರ ಭಾರತೀಯ ಪರಂಪರೆಯಲ್ಲಿ ಬದುಕುವುದಕ್ಕೆ ತೆರೆದು ಅವಕಾಶವಿತ್ತ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿ ಕೋರ್ಟ್ ಮೆಟ್ಟಿಲೇರಿದವರನ್ನೂ, ಇದಕ್ಕೆ ಹಿನ್ನೆಲೆಯಲ್ಲಿ ನಿಂತು ಬೆಂಬಲಿಸುವವರನ್ನೂ ನೋಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು 73 ವರ್ಷಗಳೇ ಸಂದರೂ ದೇಶದ್ರೋಹದ ದರಿದ್ರ ಬುದ್ಧಿಗೆ ಹಿಡಿದ ಕಿಲುಬನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ! ಯಾವುದು ದೇಶಕ್ಕೆ ಹಿತ ಯಾವುದು ದೇಶಕ್ಕೆ ಅಹಿತ ಎಂಬುದನ್ನು ಅರಿತೂ ವಾಮಮಾರ್ಗದ ಮೂಲಕ ದೇಶದ ಪ್ರಗತಿಗೆ ವಿರೋಧವಾಗಿ ನಿಲ್ಲುವವರನ್ನು, ಮಾತಾಡುವವರನ್ನು, ನೋಡಿದರೆ ನಮಗೆ ಸ್ವಾತಂತ್ರ್ಯ ಬಂದಿಲ್ಲ, ನಾವು ಸ್ವತಂತ್ರರಲ್ಲರೆಂದು ಹೇಗೆ ವ್ಯಾಖ್ಯಾನಿಸುವುದು? ಪ್ರಥಮ ಪ್ರಧಾನಿಯ ಹೆಸರನ್ನು ಹೊತ್ತ ರಾಷ್ಟ್ರದ ರಾಜಧಾನಿಯಲ್ಲಿರುವ ವಿಶ್ವವಿದ್ಯಾಲಯದಲ್ಲಿ ದೇಶವನ್ನೇ ತುಂಡರಿಸುತ್ತೇನೆ ಎಂದು ದೇಶದ್ರೋಹದ ಮಾತುಗಳನ್ನು ಆಡಿದವರೂ, ಭಯೋತ್ಪಾದಕ ಅಫ್ಜಲ್ ಗುರುವಿನ ಪರ ದನಿಯನ್ನು ಎತ್ತುವವರೂ, ವೇದಿಕೆಯಲ್ಲಿ ನಿಂತು ’ಬಹುತ್ವ ಭಾರತ’ ದ ಬಗ್ಗೆ ಮಾತಾಡುವರನ್ನು ಕಂಡರೆ ನಮಗೆ ಸಿಕ್ಕಿದ ಸ್ವಾತಂತ್ರ್ಯದ ವ್ಯಾಪ್ತಿ ಮತ್ತು ಹರಹನ್ನು ಸಂವಿಧಾನದ ಮೂಲಕ ಹೇಗೂ ವಿಸ್ತರಿಸಿಕೊಳ್ಳಲು ಸಾಧ್ಯ ಎಂಬ ಬೌದ್ಧಿಕ ಸ್ವಾತಂತ್ರ್ಯವನ್ನು ಈ ತೆರನಾಗಿ ತೆರೆದಿಡುವವರನ್ನು ಕಂಡರೆ ಅಭಿವ್ಯಕ್ತಿ ಸ್ವಾತಂತ್ರ್ಯ ದಮನವೆಂದು ಬೊಬ್ಬಿರಿಯುವುದು ಸುಳ್ಳಾಗಿ ಕಾಣುವುದಿಲ್ಲವೆ? ಇಂಥವರನ್ನು ಹೆತ್ತ ಭಾರತ ಮಾತೆಯೇ ಧನ್ಯಳು!
ಭಾರತದ ಬಹುತ್ವವೇ ನಿಜವಾದ ಏಕತ್ವ. ಅಂದರೆ ವಿವಿಧತೆಯಲ್ಲೂ ಏಕತೆಯನ್ನು ಕಾಣುತ್ತಿರುವುದು ನಮ್ಮ ನೆಲದ ವೈಶಿಷ್ಟ್ಯ. ಆ ಏಕತ್ವವೇ ಭಾರತ, ಶ್ರೇಷ್ಠ ಭಾರತ, ಸರ್ವಶ್ರೇಷ್ಠ ಭಾರತ. ಇದು ನಮ್ಮ ಹಿರಿಯರು ಕಟ್ಟಿ ಬೆಳೆಸಿದ ನಾಡಿನ ಒರಿಜಿನಲ್ ಅಸ್ಮಿತೆ. ಇದು ಹಿಂದೂಗಳ ದೇಶ ಹಿಂದೂಸ್ತಾನ. ಇಲ್ಲಿ ಬದುಕುವವರು ಯಾರೇ ಆದರೂ ಇಲ್ಲಿಯ ಸಂಪ್ರದಾಯ ಮತ್ತು ಪರಂಪರೆಯನ್ನು ಮರೆಯಲಾರರು. ಮರೆಯಬಾರದು. ಯಾಕೆಂದರೆ, ಹಿಂದೂ ಎಂದರೆ ಜೀವನ ಪದ್ಧತಿಯೇ ಹೊರತು ರಾಷ್ಟ್ರವಾಚಕವಲ್ಲ. ಇಲ್ಲಿದ್ದುಕೊಂಡೇ ದೇಶಕ್ಕೆ ಕೇಡು, ಆಪತ್ತು ಬಯಸುವವರನ್ನು ಹೆಡೆಮುರಿ ಕಟ್ಟಿ ದಂಡಿಸುವುದೂ ಇಲ್ಲಿಯ ಕಾನೂನುಗಳೇ! ಈ ದೇಶದ ಕಾನೂನಿಗೆ ಸವಾಲೆಸೆಯುವಲ್ಲಿ ಮಾತ್ರ ನಾವು ಸ್ವತಂತ್ರರಲ್ಲ. ಹೀಗೆ, ಕಾನೂನನ್ನು ಹಣದಿಂದ ಕೊಳ್ಳಲು ನಾವು ಸ್ವತಂತ್ರರಲ್ಲೆಂಬ ಎಚ್ಚರ, ಅದರ ಕುರಿತಾದ ಗೌರವ, ಪೂಜ್ಯಭಾವ ನಮ್ಮಲ್ಲಿರಬೇಕು ಎಂಬ ಸಾಮಾನ್ಯ ಅರಿವೂ ಇಲ್ಲದ ನಾವು ಸ್ವತಂತ್ರರು! ಇದೆಂಥಾ ಪರಮ ಸ್ವೇಚ್ಛೆಯ ಸ್ವಾತಂತ್ರ್ಯದ ಉಲ್ಲಂಘನೆ!?
ತಾನು ಜನರ ಪ್ರತಿನಿಧಿಯೆಂಬ ಎಚ್ಚರ ಜನಪ್ರತಿನಿಧಿಗೆ ಸದಾ ಇರಬೇಕು. ಚುನಾವಣೆಯ ಹೊತ್ತಲ್ಲಿ ಮಾತ್ರ ಆಮಿಷಗಳನ್ನು ತೋರಿಸಿ ಪ್ರಜಾಪ್ರಭುತ್ವದ ಹೆಸರಲ್ಲಿ ಓಟು ಗಿಟ್ಟಿಸಿಕೊಂಡು ಪ್ರಜಾಸತ್ತೆಯನ್ನೇ ನಾಶ ಮಾಡುವುದಕ್ಕೆ ನಾವು ಸ್ವತಂತ್ರರಲ್ಲ ಎಂಬುದು ಜನಪ್ರತಿನಿಧಿಗಳಿಗೆ ಗೊತ್ತಿರಬೇಕು. ರಾಜಕಾರಣಿಗಳು ಸ್ವಾತಂತ್ರ್ಯವನ್ನು ನಿರ್ವಚಿಸಬಾರದು. ಯಾಕೆಂದರೆ ಆ ನೈತಿಕ ಅರ್ಹತೆ ಅವರಿಗಿಲ್ಲ. ಮೋದಿಯಂಥ ಮುತ್ಸದ್ದಿಗಳು ನಿರ್ವಚಿಸಿದರೆ ನೈತಿಕ ಅರ್ಹತೆಯ ಪ್ರಶ್ನೆ ಉದ್ಭವಿಸಲಾರದು. ಸ್ವಾತಂತ್ರ್ಯ ಬಂದು 73 ವರ್ಷಗಳೇ ಸಂದರೂ ನಮ್ಮನ್ನಾಳುವವರಲ್ಲಿ ಯಾವ ಬಗೆಯ ನೈತಿಕತೆಯನ್ನು ಗುರುತಿಸಲು ಸಾಧ್ಯವಾಗಿದೆ ಹೇಳಿ? ಗುರುತಿಸಲು ಚಾನ್ಸೇ ಇಲ್ಲ, ರಾಜಕಾರಣಿಗಳೆಂದರೆ ಮೂಗು ಮುರಿಯುವವರೇ ಹೆಚ್ಚು.
ರಾಜಕಾರಣದ ಬಗ್ಗೆ ಜನರಲ್ಲಿ ಒಂದು ನೇತ್ಯಾತ್ಮಕವಾದ ಭಾವನೆ ಸಿದ್ಧವಾಗಿದೆ. ರಾಜಕಾರಣಿಗಳೆಲ್ಲರೂ ಅಲ್ಲ, ಆದರೆ, ಬಹುಪಾಲು ಎಲ್ಲ ರಾಜಕಾರಣಿಗಳೂ ಭ್ರಷ್ಟರೇ ಎಂದು ಈ ಸಮಾಜ ಒಪ್ಪಿದ ಸತ್ಯ! ಆದರೂ, ಸಾಧಾರಣ ಮಟ್ಟದ ಭ್ರಷ್ಟಾಚಾರದಲ್ಲಿ ರಾಜಕಾರಣಿಗಳ ಹೆಸರು ಪ್ರಚಾರವಾದರೆ ಜನ ಅದರ ಬಗ್ಗೆ ತಲೆಬಿಸಿ ಮಾಡಿಕೊಳ್ಳುವುದಿಲ್ಲ. ರಾಜಕಾರಣವೇ ಇತ್ತೀಚಿನ ದಿನಮಾನಗಳಲ್ಲಿ ಅಸ್ಪೃಶ್ಯವಾಗಿಬಿಟ್ಟಿದೆ ಎನ್ನುವುದಕ್ಕಿಂತಲೂ ಅದನ್ನು ಇಂದಿನ ದುಸ್ಸಂಸ್ಕೃತಿಯ ರಾಜಕಾರಣಿಗಳು ಅಸ್ಪೃಶ್ಯಗೊಳಿಸಿದ್ದಾರೆ.
ತಾವು ಬಯಸಿದಂತೆ ರಾಜಕಾರಣಿಗಳು ಏನನ್ನೂ ಕೊಳ್ಳುವ ಸ್ಥಿತಿಯನ್ನು ಮುಟ್ಟಿದ್ದಾರೆ ಎಂಬುದು ಎಷ್ಟು ಸತ್ಯವೋ ರಾಜಕಾರಣವು ತನ್ನೆಲ್ಲ ಮೌಲ್ಯಗಳನ್ನು ಕಳೆದುಕೊಳ್ಳುವಲ್ಲಿಯೂ ಇವರೇ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆಂಬುದೂ ಅಷ್ಟೇ ಸತ್ಯ! ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಬರದೇ, ತನ್ನ ಪಟಾಲಂ ಅನ್ನು ಕಟ್ಟಿಕೊಂಡು ದೌಲತ್ತಿನಿಂದ ಷೋಕಿ ಮಾಡುತ್ತಾ ತಡವಾಗಿ ಬಂದ ರಾಜಕಾರಣಿಯೋರ್ವ ವೇದಿಕೆಯಲ್ಲಿ ನಿಂತು ಸಮಯ ಸಂದರ್ಭದ ಔಚಿತ್ಯವನ್ನು ಗಣಿಸದೆ ಏನನ್ನೂ ಮಾತಾಡುತ್ತಾನೆ ಅಸಂಗತವಾಗಿ, ಅಸಂಬದ್ಧವಾಗಿ. ಸಭೆಯ ಘನತೆಯನ್ನೂ ಕಳೆಯುತ್ತಾನೆ. ಆದರೆ, ಅವನು ಹಾಗೆ ವರ್ತಿಸಲೇ ಬೇಕು. ಅಂದಾಗ ಮಾತ್ರ ಅವ ರಾಜಕಾರಣಿಯಾಗಲು ಅರ್ಹನೆಂದು ಜನ ತೀರ್ಮಾನಿಸಿಯಾಗಿದೆ. ಆದ್ದರಿಂದ ಅವನ ಮಾತನ್ನುಯಾರೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಅವನು ಭಾಷಣ ಆರಂಭಿಸುತ್ತಿದ್ದಂತೆ ಸಭಾಸದರು ಮಾತಿಗೆ ಸುರುವಿಟ್ಟುಕೊಳ್ಳುತ್ತಾರೆ. ಅವನ ಮಾತನ್ನು ಕೇಳುವ ಅಗತ್ಯ ಅವರಿಗಷ್ಟೇ ಅಲ್ಲ, ಯಾರಿಗೂ ಇರುವುದಿಲ್ಲ.
ರಾಜಕಾರಣಿಗಳನ್ನು ಸಮೂಹವು ಸ್ವೀಕರಿಸುವ ಅಥವಾ ಒಪ್ಪುವ ರೀತಿಯಲ್ಲಿ ಅಸಹನೆಯಿರುವುದಕ್ಕೆ ರಾಜಕಾರಣಿಗಳೇ ಕಾರಣ ಹೊರತು ಬೇರೆ ಯಾರೂ ಅಲ್ಲ, ಯಾವುದೂ ಅಲ್ಲ. ನಾವೀಗ ಶ್ರೇಷ್ಠವಾದ ದೊಡ್ಡದೂ ಆದ ಪ್ರಜಾಪ್ರಭುತ್ವವನ್ನು ಹೊಂದಿದ ವಿಶ್ವದ ಏಕೈಕ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ಇಷ್ಟು ದೊಡ್ಡ ಪ್ರಜಾಪ್ರಭುತ್ವ ಮತ್ತು ಬಹುಕೋಟಿ ಜನಸಂಖ್ಯೆಯುಳ್ಳ ರಾಷ್ಟ್ರಕ್ಕೆ ವೈವಿಧ್ಯತೆಯೆಂಬುದು ಪೂರಕವಾಗಿಯೂ ಮಾರಕವಾಗಿಯೂ ಒದಗಬಲ್ಲುದು. ವಸುಧೈವ ಕುಟುಂಬಕಮ್ ಎಂಬ ಉದಾತ್ತವಾದ ಶ್ರೇಷ್ಠ ಪರಿಧಿಯಲ್ಲಿ ಮನುಷ್ಯ ಸಹಜ ನೆಲೆಯಲ್ಲಿ ಈ ವೈವಿಧ್ಯತೆಯನ್ನು ಅರಗಿಸಿಕೊಂಡು ಶತಮಾನಗಳಿಂದ ಬಾಳಿ ಬಂದ ಚರಿತ್ರೆ ನಮ್ಮದು. ಅದೇ ಪರಿಧಿಯಲ್ಲಿ ರಾಜಕಾರಣಿಗಳು ನಡೆದುಕೊಂಡರೆ ಯಾವ ಗೊಂದಲಗಳು ಉದ್ಭವಿಸಲಾರದು. ಭವಿಷ್ಯದಲ್ಲಿ ನಮ್ಮ ರಾಜಕಾರಣಿಗಳು ಇಂಥ ಪರಿಧಿಯಲ್ಲಿ ನಡೆದುಕೊಳ್ಳಲಿ. ಅಂಥ ಅಪೇಕ್ಷಿತ ಬದಲಾವಣೆಗಳು ಈ ದೇಶದಲ್ಲಿ ಕಾಣುವಂತಾಗಲಿ
(ಟಿ ದೇವಿದಾಸ್ ವೈಚಾರಿಕ ಬರಹಗಾರರು.ಚಿಕ್ಕಮಗಳೂರಿನ ಸಂಗಮೇಶ್ವರ ಪೇಟೆಯ ಪೂರ್ಣಪ್ರಜ್ಞಾ ಹೈಸ್ಕೂಲಿನಲ್ಲಿ ಅಧ್ಯಾಪಕರು)