ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳಲ್ಲಿ ಷೇರು ಹೊಂದಿರುವ ಮೂರು ಎಫ್‌ಪಿಐ (ವಿದೇಶಿ ಬಂಡವಾಳ ಹೂಡಿಕೆ) ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ಮುಟ್ಟುಗೋಲು ಹಾಕಿಕೊಂಡ ಘಟನೆ ನಡೆದಿದೆ. ಈ ಬೆಳವಣಿಗೆ ನಡೆದ ಬೆನ್ನಲ್ಲೇ ಸೋಮವಾರದ ಬೆಳಗ್ಗಿನ ವಹಿವಾಟಿನಲ್ಲಿ ‘ಅದಾನಿ ಎಂಟರ್‌ಪ್ರೈಸಸ್’ ಷೇರು ಮೌಲ್ಯವು ಶೇ. 25ರಷ್ಟು ಕುಸಿತ ಕಂಡಿದೆ.
ಮುಂಬೈ ಷೇರುಪೇಟೆಯಲ್ಲಿ ‘ಅದಾನಿ ಎಂಟರ್‌ಪ್ರೈಸಸ್’ ಷೇರು ಮೌಲ್ಯವು ಶೇ 24.99ರಷ್ಟು ಕುಸಿದು ₹1,201.10 ಆಗಿದೆ. ‘ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕಾನಮಿಕ್ ಝೋನ್’ ಷೇರು ಮೌಲ್ಯ ಶೇ 18.75ರಷ್ಟು ಕುಸಿದು ₹681.50 ಆಗಿದೆ.
ಅದಾನಿ ಗ್ರೀನ್ ಎನರ್ಜಿ’ ಷೇರು ಮೌಲ್ಯ ಶೇ 5ರಷ್ಟು ಇಳಿಕೆಯಾಗಿ ₹1,165.35 ಆಗಿದೆ. ‘ಅದಾನಿ ಟೋಟಲ್ ಗ್ಯಾಸ್’ ಷೇರು ಮೌಲ್ಯ ಶೇ 5ರಷ್ಟು ಕುಸಿದು ₹1,544.55 ಆಗಿದೆ. ‘ಅದಾನಿ ಟ್ರಾನ್ಸ್‌ಮಿಷನ್’ ಷೇರು ಮೌಲ್ಯ ಶೇ 5ರಷ್ಟು ಇಳಿಕೆಯಾಗಿದೆ ₹1,517.25 ಮತ್ತು ‘ಅದಾನಿ ಪವರ್’ ಷೇರು ಮೌಲ್ಯ ಶೇ 4.99ರಷ್ಟು ಕುಸಿದು ₹140.90 ಆಗಿದೆ.