ಉಡುಪಿ: ಮಿಷನ್ ಆಸ್ಪತ್ರೆಯ ಇತಿಹಾಸದಲ್ಲಿ ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್ ಕಾಲೇಜಿನ ಸ್ಥಾಪನೆ ಪ್ರಮುಖ ಮೈಲಿಗಲ್ಲಾಗಿದೆ. ಇದು ಮಿಷನ್ ಆಸ್ಪತ್ರೆಯ ನಾಲ್ಕನೇ ಕ್ಯಾಂಪಸ್ ಆಗಿದ್ದು, ದೇಶ ವಿದೇಶದಲ್ಲಿ ಮಾನ್ಯತೆ ಪಡೆದಿರುವ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ತರಬೇತಿಗೆ ಮೀಸಲಾಗಿದೆ ಎಂದು ಎಲ್.ಎಂ.ಎಚ್ ನ ನಿರ್ದೇಶಕ ಸುಶೀಲ್ ಜತ್ತನ್ನ ಹೇಳಿದರು.
ಶುಕ್ರವಾರದಂದು ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಹೊಸ ಕ್ಯಾಂಪಸ್ “ ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್” ಅನ್ನು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1855 ರಲ್ಲಿ ಪ್ರಾರಂಭಿಸಲಾಗಿದ್ದ ಯುಬಿಎಂಸಿ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ಶಾಲೆಯ ಹಳೆ ವಿದ್ಯಾರ್ಥಿಗಳ ಆಶಯದಂತೆ ಇದನ್ನು ಪ್ಯಾರಾಮೆಡಿಕಲ್ ಕಾಲೇಜಾಗಿ ಪರಿವರ್ತಿಸಲಾಗಿದೆ. ದೇಶ ಹಾಗೂ ವಿದೇಶದಲ್ಲಿ ಇಂದು ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿಭಾಗಕ್ಕೆ ಅತಿ ಹೆಚ್ಚು ಬೇಡಿಕೆ ಇದ್ದು ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡುವುದರ ಜೊತೆಗೆ ಲಾಭದ ಕುರಿತು ಆಲೋಚಿಸದೆ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸಿ ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶವಿದೆ ಎಂದ ಅವರು, ಸಂಸ್ಥೆಯ ಏಳಿಗೆಗಾಗಿ ದುಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಮಿಷನ್ ಸಂಸ್ಥೆಯು ಆರೋಗ್ಯ, ಶಿಕ್ಶಣ, ಕೈಗಾರಿಕೆ, ಕೃಷಿ ಹಾಗೂ ಪ್ರಿಂತಿಂಗ್ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದು ಸಂಸ್ಥೆಯ ಗತವೈಭವ ಮರುಕಳಿಸಲಿ ಎಂದು ಹಾರೈಸಿದರು.
ನೂತನ ಸಂಸ್ಥೆಯನ್ನು ಸಂಸ್ಥೆಯ ಅಧ್ಯಕ್ಷ, ಬಿಷಪ್ ರೆ.ಫಾ.ಹೇಮಚಂದ್ರ ಕುಮಾರ್ ಉದ್ಘಾಟಿಸಿ ಹಾರೈಸಿದರು.
ಕಿನ್ನಿಮುಲ್ಕಿ ವಾರ್ಡ್ನ ಕೌನ್ಸಿಲರ್ ಅಮೃತಾ ಕೃಷ್ಣಮೂರ್ತಿ, ಬಿಗ್ ಜೆ ಮಿಡಿಯಾದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಉಡುಪಿ ಮದರ್ ಆಫ್ ಸಾರೋಸ್ ಚರ್ಚ್ನ ಧರ್ಮಗುರು ರೆ. ಫಾ.ಚಾರ್ಲ್ಸ್ ಮೆನೇಜಸ್, ಕಾಪುವಿನ ಜಮಿಯ್ಯತುಲ್ ಫಲ್ಹಾದ ಅಧ್ಯಕ್ಷ ಶಾಬಿಹ ಅಹಮದ್ ಕಾಝಿ, ಹಳೆವಿದ್ಯಾರ್ಥಿಗಳಾದ ಬಿ.ಎಸ್ ಶೇರಿಗಾರ್, ಸ್ಟ್ಯಾನ್ಲಿ ಕರ್ಕಡ ಶುಭ ಹಾರೈಸಿದರು.
ಸಂಸ್ಥೆಯ ನಿವೃತ್ತ ಪ್ರಾಂಶುಪಾಲರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಐವನ್ ಡಿ ಸೋನ್ಸ್ ಪ್ರಾರ್ಥಿಸಿದರು. ಡಾ. ಪೆರಲಾಯ ಸ್ವಾಗತಿಸಿದರು. ಅಕ್ಷತಾ ಪ್ರಭು ವಂದಿಸಿದರು. ಲೈನಲ್ ಸ್ಟೆನಿಟಾ ಮತ್ತು ಆನೆಟ್ ವೀಕ್ಷಿತಾ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುಂಚೆ ಆಸ್ಪತ್ರೆಯಿಂದ ಕಾಲೇಜಿನವರೆಗೆ ಮೆರವಣಿಗೆ ಸಾಗಿತು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.