ಏಪ್ರಿಲ್ 18 ರಂದು ನಡೆಯುವ ಉಡುಪಿ -ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಅವರಿಗೆ ಅಂಚೆಮತ ಪತ್ರ ಮತ್ತು ಇಡಿಸಿ ವಿತರಿಸುವಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ನಿಯೋಜಿಸರುವ ಅಂಚೆ ಮತಪತ್ರ ನಿರ್ವಹಣೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯವಾಗಿದೆ, ಅದರಲ್ಲೂ ಚುನಾವಣಾ ಕರ್ತವ್ಯದಲ್ಲಿರುವ ಸರ್ಕಾರಿ ನೌಕರರ ಮತಗಳೇ ಸರಿಯಾಗಿ ಚಲಾವಣೆಯಾಗಿಲ್ಲವಾದರೆ ಲೋಪವಾಗುತ್ತದೆ ಆದ್ದರಿಂದ ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯಲ್ಲಿ , ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ /ಸಿಬ್ಬಂದಿಗಳು ಕೋರಿರುವ ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್ ಅರ್ಜಿಗಳನ್ನು ಕೂಡಲೇ ವಿತರಿಸಿ, 2 ದಿನದಲ್ಲಿ ಸಂಪೂರ್ಣ ವರದಿ ನೀಡುವಂತೆ ಹಾಗೂ ಈಗಾಗಲೇ ಸಂಗ್ರಹಿಸಿರುವ ಅರ್ಜಿಗಳನ್ನು ಕೂಡಲೇ ಸಂಬಂದಪಟ್ಟ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಕಳುಹಿಸಿ, ಯಾವುದೇ ಕಾರಣಕ್ಕೂ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗದಂತೆ ಎಚ್ಚರವಹಿಸಿ ವಿದ್ಯಾಕುಮಾರಿ ಸೂಚಿಸಿದರು.
ಮಸ್ಟರಿಂಗ್ ದಿನ ತಾನು ಖುದ್ದು ಸಿಬ್ಬಂದಿಗಳನ್ನು ಇಡಿಸಿ ಪಡೆದಿರುವ ಕುರಿತು ಪರಿಶೀಲನೆ ನಡೆಸಲಿದ್ದು, ಯಾವುದೇ ಸಿಬ್ಬಂದಿ ಈ ಬಗ್ಗೆ ದೂರು ನೀಡಿದಲ್ಲಿ ಸಂಬಂದಪಟ್ಟವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದ ಅಪರ ಜಿಲ್ಲಾಧಿಕಾರಿ, ಮಸ್ಟರಿಂಗ್ ಸಮಯದಲ್ಲಿ ಅಂಚೆಮತಪತ್ರ ಚಲಾವಣೆಗೆ ಆರಂಭಿಸುವ ಪೆಸಿಲಿಟೇಷನ್ ಕೇಂದ್ರದಲ್ಲಿ ಅಗತ್ಯ ನಿಯಮಗಳನ್ನು ಅನುಸರಿಸಿ, ಯಾವುದೇ ಕಾರಣಕ್ಕೂ ಅಂಚೆ ಮತಪತ್ರಗಳ ದುರುಪಯೋಗ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಸಭೆಯಲ್ಲಿ , ಉಡುಪಿ ಜಿಲ್ಲಾ ಅಂಚೆಪತ್ರದ ನೋಡಲ್ ಆಧಿಕರಿ ಕೃಷ್ಣ ಹೆಪ್ಸೂರ್ ಮತ್ತು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ , ವಿವಿಧ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳು ಉಪಸ್ಥಿತರಿದ್ದರು.