ಶೋಭಾ ವೈಫಲ್ಯತೆ ಸದ್ಬಳಕೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ: ಅಮೃತ್ ಶೆಣೈ

ಉಡುಪಿ: ಕಾಂಗ್ರೆಸ್‌ ಹೈಕಮಾಂಡ್‌ ಸಂಸದೆ ಶೋಭಾ ಕರಂದ್ಲಾಜೆಯ ನಿಷ್ಕ್ರಿಯತೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯತೆಯನ್ನು ಸದ್ಬಳಕೆ ಮಾಡಿಕೊಂಡು ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಬದಲು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಬಗ್ಗೆ ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್‌ ಶೆಣೈ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ಹೈಕಮಾಂಡ್‌  ನಿರ್ಧಾರ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸೋಲಿಸಲು ಪೂರಕವಾಗಿಲ್ಲ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಅವರ ನಿಷ್ಕ್ರಿಯತೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿದ್ದೇವೆ. ಶೋಭಾ ಅವರು ಮತ್ತೆ ಗೆಲ್ಲಬಾರದು ಎಂಬ ಉದ್ದೇಶದಿಂದ ಹೋರಾಟ ಮಾಡಿದ್ದೇವೆ. ಆದರೆ ಹೈಕಮಾಂಡ್‌ ನಮ್ಮ ಶ್ರಮಕ್ಕೆ ಮನ್ನಣೆ ನೀಡಿಲ್ಲ. ಕ್ಷೇತ್ರ ಜೆಡಿಎಸ್‌ ಪಾಲಾದ ಬಳಿಕ ಜೆಡಿಎಸ್‌ ನಾಯಕರೇ ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾಂಗ್ರೆಸ್‌ ನಾಯಕಿ ಆರತಿ ಕೃಷ್ಣ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರನ್ನು ಅಭ್ಯರ್ಥಿ ಮಾಡಲು ಪ್ರಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.
ಜೆಡಿಎಸ್‌ನಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣ ಆಗಿದ್ದರೂ ಸಹ ಪ್ರಮೋದ್‌
ಮಧ್ವರಾಜ್‌ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಿ ಎಂದು ಹೇಳಿಲ್ಲ. ಎರಡು
ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿರೋಧವನ್ನು ಹೈಕಮಾಂಡ್‌ಗೆ ಮುಟ್ಟಿಸುವ
ಪ್ರಯತ್ನ ಮಾಡಿಲ್ಲ. ಅದರ ಬದಲು ಸ್ವತಃ ತಾವೇ ಜೆಡಿಎಸ್‌ನಿಂದ ಟಿಕೆಟ್‌ ಪಡೆದುಕೊಂಡು ಬಂದು ಸ್ಪರ್ಧಿಸುತ್ತಿದ್ದಾರೆ ಎಂದು ದೂರಿದರು.
ಪ್ರಮೋದ್‌ ಗೆದ್ದರು ಅಥವಾ ಸೋತರು ಜೆಡಿಎಸ್‌ನಲ್ಲಿ ಇರುತ್ತಾರೆ. ಹಾಗಾದರೆ
ಕಾಂಗ್ರೆಸ್‌ನ ಗತಿ ಏನು?. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆ ಸ್ಥಳೀಯ ಸಂಸ್ಥೆ
ಚುನಾವಣೆ ಸೇರಿದಂತೆ ವಿಧಾನಸಭೆ ಚುನಾವಣೆಯಲ್ಲಿ ಸೀಟು ಬಿಟ್ಟುಕೊಡಬೇಕಾದ ಪರಿಸ್ಥಿತಿ ಬರಬಹುದು. ನಾನು ಮಾಡುವುದು ಪಕ್ಷ ವಿರೋಧಿ ಚಟುವಟಿಕೆಯಾದರೆ, ಟಿಪ್ಪು ಜಯಂತಿಗೆ ಹೋಗದೆ ಚರ್ಚ್‌ಗಳ ಮೇಲಿನ ದಾಳಿಗೆ ಟಿಪ್ಪು ಕಾರಣ ಎಂದು ಹೇಳುವುದು ಕೂಡ ಪಕ್ಷ ವಿರೋಧಿ ಚಟುವಟಿಕೆ ಎಂದು ಟೀಕಿಸಿದರು.
ಕೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಕೇಂದ್ರದಿಂದ ಅನುದಾನ ತರುವಲ್ಲಿ ಹಾಗೂ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸುವಲ್ಲಿ ಶೋಭಾ ಕರಂದ್ಲಾಜೆ ವಿಫಲರಾಗಿದ್ದಾರೆ. ಧರ್ಮ ಹಾಗೂ ಧಾರ್ಮಿಕ ವಿಚಾರಗಳ ನೆಲೆಯಲ್ಲಿ ಜನರನ್ನು ಪ್ರತ್ಯೇಕಿಸಲಾಗುತ್ತಿದೆ. ಮರಳಿನ ಸಮಸ್ಯೆಯಿಂದ ಜಿಲ್ಲೆಯ ಆರ್ಥಿಕತೆ ಸಂಪೂರ್ಣ ಕುಸಿದಿದೆ. ರೈತರು, ಅಡಿಕೆ ಹಾಗೂ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಯಾವುದೇ ಅನುದಾನದ ಪ್ಯಾಕೇಜ್‌ ಸಿಕ್ಕಿಲ್ಲ. ಮೀನುಗಾರರ ಶ್ರಮಕ್ಕೂ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ಹೇಳಿದರು.
ನಾನು ಸಂಸದನಾದರೆ ಎರಡು ಜಿಲ್ಲೆಯ ಜನರ ಜತೆಗೆ ಸಭೆ ನಡೆಸಿ, ಸಂಸತ್ತಿನಲ್ಲಿ ಯಾವ ಪ್ರಶ್ನೆ ಕೇಳಬೇಕು ಹಾಗೂ ಏನೆಲ್ಲ ಮಾಡಬೇಕೆಂದು ಕೇಳುತ್ತೇನೆ. ಜನರ ಅಭಿಪ್ರಾಯದಂತೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ. ಜನರ ಸೇವೆ ಮಾಡುವುದರ ಜತೆಗೆ ಸಾಮಾಜಿಕ
ಸಾಮರಸ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ ಎಂದರು.
ನಾನು ಇನ್ನೂ ಎಐಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಈ ಬಗ್ಗೆ ಮತದಾನಕ್ಕೂ ಮೊದಲು ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಉದ್ಯಮಿ ಶಾಹಿದ್‌, ಸಮಾಜ ಸೇವಕಿ ಅನಿತಾ ಡಿಸೋಜ, ಜಯಶ್ರೀ ಭಟ್‌, ಮನೋವೈದ್ಯ ಡಾ. ಪಿ.ವಿ. ಭಂಡಾರಿ, ವರದರಾಜ್‌, ಅನ್ಸರ್‌ ಅಹಮ್ಮದ್‌, ಅಹ್ಮದ್‌ ನೇಜಾರು, ಆಜ್ಞೇಶ್‌ ಆಚಾರ್ಯ, ರಾಜಗೋಪಾಲ ರೈ, ಕಿಶೋರ್‌ ಶೆಟ್ಟಿ ಇದ್ದರು.