ರಮಝಾನ್ ತಿಂಗಳಲ್ಲಿಯೂ ಲಾಕ್‍ಡೌನ್ ಕಡ್ಡಾಯವಾಗಿ ಪಾಲಿಸಿ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

ಉಡುಪಿ: ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಿದೆ. ಲಾಕ್ ಡೌನ್ ಮುಗಿಯುವವರೆಗೆ ಮಸೀದಿಗಳಲ್ಲಿ ಎಲ್ಲ ಸಾಮೂಹಿಕ ನಮಾಝ್ ಗಳನ್ನೂ  ನಿಲ್ಲಿಸಲು ಸರಕಾರ ಸೂಚನೆ ನೀಡಿದೆ. ಈ ನಡುವೆ ಪ್ರಾರಂಭವಾಗಲಿರುವ  ರಮಝಾನ್ ತಿಂಗಳಲ್ಲೂ  ಲಾಕ್‍ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ಕರೆ ನೀಡಿದ್ದಾರೆ.
ರಾಜ್ಯ ಸರಕಾರ, ರಾಜ್ಯ ವಕ್ಫ್ ಬೋರ್ಡ್ ಹಾಗು ರಾಜ್ಯದ ಅಮೀರೆ ಶರೀಅತ್  ಅವರು ಈಗಾಗಲೇ ಲಾಕ್ ಡೌನ್ ಸಂದರ್ಭದಲ್ಲಿ ಮಸೀದಿಗಳಿಗೆ ತೆರಳದಂತೆ ಕರೆ ನೀಡಿದ್ದಾರೆ. ಸರಕಾರ ಹಾಗು ಸಮುದಾಯದ ಧಾರ್ಮಿಕ ಮುಖಂಡರ ಸೂಚನೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕೊರೊನ ನಿಯಂತ್ರಣದಲ್ಲಿ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಸೀದಿಗಳಿಗೆ ತೆರಳದೆ ಪ್ರತಿ ದಿನದ ಐದು ಹೊತ್ತಿನ ನಮಾಝ್ ಅನ್ನು ಮನೆಯಲ್ಲಿ ನಿರ್ವಹಿಸಬೇಕು. ಅಲ್ಲದೆ, ತರಾವೀಹ್ ನಮಾಝ್ ಅನ್ನು ಆಯಾ ಕುಟುಂಬ ಸದಸ್ಯರು ಸೇರಿ ಮನೆಯಲ್ಲಿಯೇ ನಿರ್ವಹಿಸಬೇಕು  . ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ ವಿಚಾರದಲ್ಲಿ ಸರಕಾರ ನೀಡುವ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು ಎಂದು ಅವರು ತಿಳಿಸಿದರು.
ಸರಕಾರ ಸೂಚಿಸಿರುವಂತೆ ಸಹರಿ ಹಾಗೂ ಇಫ್ತಾರ್ ಕೂಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿ. ರಮಝಾನ್ ಮಾಸದಲ್ಲಿ ಬಡವರು, ಅಗತ್ಯ ಇರುವವರಿಗೆ ನೆರವು ನೀಡಿ. ಝಕಾತ್ ಹಾಗೂ ಸದಖಾ ಮೂಲಕ  ಸಂಬಂಧಿಕರು, ನೆರೆಹೊರೆಯವರು ಹಾಗೂ ನೆರವಿನ ಅಗತ್ಯ ಇರುವಂತಹ ಸರ್ವಧರ್ಮೀಯರಿಗೆ ನೆರವು ನೀಡಿ ಎಂದು ಅವರು ಕರೆ ನೀಡಿದ್ದಾರೆ.
ಇಫ್ತಾರ್, ತಹಜ್ಜುದ್ ಸಂದರ್ಭದಲ್ಲಿ ನಮ್ಮ ದೇಶ, ಮಾನವ ಕುಲ ಈ ಸಂಕಷ್ಟದ ಪರಿಸ್ಥಿತಿಯಿಂದ ಹೊರ ಬರುವಂತೆ ಪ್ರತಿಯೊಬ್ಬರೂ ಪ್ರಾರ್ಥನೆ ಮಾಡಬೇಕು. ನಮ್ಮ ದೇಶ ಹಾಗೂ ಸಮುದಾಯಕ್ಕೆ ಸಮಸ್ಯೆಯನ್ನುಂಟು ಮಾಡುವಂತಹ ಯಾವುದೇ ಬಗೆಯ ಚಟುವಟಿಕೆಗಳನ್ನು ಮಕ್ಕಳು ಅಥವಾ ಯುವಕರು ಸೇರಿದಂತೆ ಯಾರೂ ಮಾಡದಂತೆ ಪೋಷಕರು, ಕುಟುಂಬದ ಜವಾಬ್ದಾರಿಯುತ ಸದಸ್ಯರು ಗಮನ ಹರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಮುಸ್ಲಿಮರು ಮೊದಲ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲ ಸರಕಾರಿ ಸೂಚನೆಗಳನ್ನು ಪಾಲಿಸಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಜೊತೆಗೆ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಈಗ ಎರಡನೇ ಹಂತದ ಲಾಕ್ ಡೌನ್ ನಲ್ಲೂ ಜಿಲ್ಲೆಯ ಮುಸ್ಲಿಮರು ಅದೇ ರೀತಿ ತಮ್ಮ ಸಹಕಾರವನ್ನು ಮುಂದುವರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.