ಬ್ರಹ್ಮಾವರ: ವೀರಗಾಥಾ 3.0 ಸ್ಪರ್ಧೆಯಲ್ಲಿ ಬಹುಮಾನ ಪಡೆದ ಲಿಟಲ್ ರಾಕ್ ಶಾಲೆಯ ವಿದ್ಯಾರ್ಥಿನಿ ಧೃತಿ. ಎಸ್

ಬ್ರಹ್ಮಾವರ: ಭಾರತೀಯ ರಕ್ಷಣಾ ಇಲಾಖೆ ಹಾಗೂ ಭಾರತೀಯ ಶಿಕ್ಷಣ ಇಲಾಖೆಗಳ ಜಂಟಿ ಸಹಯೋಗದಲ್ಲಿ ‘ಗ್ಯಾಲಂಟ್ರಿ ಅವಾರ್ಡ್ಸ್ ಪೋರ್ಟಲ್ ಆಫ್ ಇಂಡಿಯಾ’ ಅಡಿಯಲ್ಲಿ ಆಯೋಜಿಸಲ್ಪಟ್ಟ “ವೀರಗಾಥಾ 3.0 ಸ್ಪರ್ಧೆ” ಯಲ್ಲಿ ದೇಶದ ಟಾಪ್ 100 ವಿದ್ಯಾರ್ಥಿಗಳಲ್ಲಿ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ ವಿದ್ಯಾರ್ಥಿನಿ ಧೃತಿ. ಎಸ್ 8 ನೇ ತರಗತಿ ವಿಭಾಗದಲ್ಲಿ ಆಯ್ಕೆಯಾಗಿದ್ದಾಳೆ.

ಈ ಸ್ಪರ್ಧೆಯಲ್ಲಿ ದೇಶದ 2.43 ಲಕ್ಷ ಶಾಲೆಗಳಿಂದ 1.37 ಕೋಟಿ ವಿದ್ಯಾರ್ಥಿಗಳು 4 ವರ್ಗಗಳಲ್ಲಿ
ವಿವಿಧ ವಿಷಯಗಳಲ್ಲಿ ಭಾಗವಹಿಸಿದ್ದು, ಚಿತ್ರಕಲಾ ಕ್ಷೇತ್ರದಲ್ಲಿ ಧೃತಿ ಸಲ್ಲಿಸಿದ್ದ ಚಿತ್ರವು ಆಯ್ಕೆಯಾಗಿದ್ದು ಬಹುಮಾನ ಲಭಿಸಿದೆ.

ಬಹುಮಾನವನ್ನು ಪಡೆಯಲು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿ ಎಂದು ಆಹ್ವಾನಿಸಲಾಗಿದ್ದು, ಡಿ.ಆರ್.ಡಿ.ಒ ಭವನ ಸಭಾಂಗಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ , ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ದೇಶದ ಸೇನೆಯ ಸರ್ವೋಚ್ಚ ನಾಯಕರು ಉಪಸ್ಥಿತರಿದ್ದ ವೇದಿಕೆಯಲ್ಲಿ ಬಹುಮಾನ ನೀಡಲಾಯಿತು.