ಗಿಡ ನೆಟ್ಟು ಸ್ವಚ್ಛ ಪರಿಸರ ನಿರ್ಮಿಸೋಣ- ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಪರಿಸರ ಪ್ರೇಮಿಗಳು ಬೈಲೂರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ, ಕಲಾ ಕಿರಣ್ ಕ್ಲಬ್ ಬೈಲೂರು, ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ ಇವುಗಳ ಸಹಭಾಗಿತ್ವದಲ್ಲಿ ‘ಹಸಿರು ನನ್ನೂರು ಬೈಲೂರು’ ಚಿತ್ರಕಲಾ ಸ್ಪರ್ಧೆಯನ್ನು ಬೈಲೂರು ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಗಿಡಗಳನ್ನು ನೆಡುವುದು ಮುಖ್ಯ ಅಲ್ಲ. ಅದನ್ನು ಪೋಷಿಸಿ ಬೆಳೆಸುವುದು ಬಹಳ ಮುಖ್ಯ. ಪರಿಸರ ನಮಗೆ ಬೆಳಕು, ಗಾಳಿ, ನೀರು ಸೇರಿದಂತೆ ಎಲ್ಲವನ್ನು ನೀಡುತ್ತಿದೆ. ಅದಕ್ಕೆ ಪ್ರತಿಯಾಗಿ ನಾವು ಗಿಡಗಳನ್ನು ನೆಟ್ಟು ಪರಿಸರವನ್ನು ಇನ್ನಷ್ಟು ಸ್ವಚ್ಛ ಸುಂದರಗೊಳಿಸಬೇಕು ಎಂದು ಹೇಳಿದರು.

ಮೊದಲು ನಾವು ಬದಲಾಗಬೇಕು. ಯುವ ಜನತೆ ತಮ್ಮ ತಮ್ಮ ಮನೆಗಳ ಆವರಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛವಾಗಿ ಇಡಬೇಕು. ಇದರಿಂದ ಇಡೀ ಪರಿಸರವನ್ನು ಸ್ವಚ್ಛವಾಗಿ ಇಟ್ಟು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಡಾ.ಯು.ಕೃಷ್ಣ ಮುನಿಯಾಲ್ ಮೆಮೋರಿ ಯಲ್ ಟ್ರಸ್ಟ್‌ನ ಟ್ರಸ್ಟಿ ಡಾ.ಶ್ರದ್ಧಾ ಶೆಟ್ಟಿ ಮಾತನಾಡಿದರು. ಮುಖ್ಯ ಅತಿಥಿ ಗಳಾಗಿ ಉಡುಪಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಯ ಉಪ ನಿರ್ದೇಶಕ ಡಾ.ಎಂ.ಸಿ.ರೆಡ್ಡಪ್ಪ, ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಮುದ್ದಣ್ಣ ಶೆಟ್ಟಿ, ಎಸ್‌ವಿಸಿ ಬ್ಯಾಂಕಿನ ನಿರ್ದೇಶಕ ಸತೀಶ್ ರಾವ್, ಕಲಾಕಿರಣ್ ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಬಡಗಬೆಟ್ಟು ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.