ಉಡುಪಿ: ಉಡುಪಿಯ ಜನತೆ ನಾಡಹಬ್ಬ ಪರ್ಯಾಯ ಮಹೋತ್ಸವದ ಸಂಭ್ರಮದಲ್ಲಿ ಇರುವಾಗಲೇ ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಅಜಾಗರೂಕತೆಯಿಂದ ನಡೆದುಕೊಂಡರೆ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ನಾವೇ ಹೊಣೆಗಾರರಾಗುತ್ತೇವೆ. ಹೀಗಾಗಿ ತೀರಾ ಸಾಂಪ್ರದಾಯಿಕ ವಿಧಿಗಳಿಗೆ ಒತ್ತು ಕೊಟ್ಟು ಸರಳವಾಗಿ ಈ ಬಾರಿಯ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವವನ್ನು ನಡೆಸಲು ಸಮಿತಿ ತೀರ್ಮಾನಿಸಿದೆ. ಉಡುಪಿಯ ಸಮಸ್ತ ನಾಗರಿಕರು, ಶ್ರೀಕೃಷ್ಣನ ಭಕ್ತರು ಸರ್ಕಾರದ ಕೋವಿಡ್ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಿಕೊಂಡು ಪರ್ಯಾಯೋತ್ಸವವನ್ನು ಉತ್ತಮವಾಗಿ ನಡೆಸಿಕೊಡಬೇಕೆಂದು ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿ ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಬಗ್ಗೆ ಇಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಗಳು, ಪರ್ಯಾಯೋತ್ಸವದ ಹೊತ್ತಲ್ಲೇ ಸರ್ಕಾರವು ನಾಡಿನ ಹಿತಕ್ಕಾಗಿ ಕೈಗೊಳ್ಳುವ ಉಪಕ್ರಮಗಳಿಗೆ ನಾವೆಲ್ಲ ಬದ್ಧರಾಗಿರಬೇಕು. ಇದು ಅನಿವಾರ್ಯವೂ ಆಗಿದೆ. ಆದ್ದರಿಂದ ಸರ್ಕಾರ ನೀಡುವ ಸೂಚನೆ ಹಾಗೂ ಮಾರ್ಗದರ್ಶನವನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಿಕೊಂಡು ಸರಳ ರೀತಿಯಲ್ಲಿ ಪರ್ಯಾಯೋತ್ಸವನ್ನು ಆಚರಿಸೋಣ. ಯಾರೂ ಈ ಬಗ್ಗೆ ಬೇಸರ ಮಾಡಬಾರದೆಂದು ಕರೆನೀಡಿದ್ದಾರೆ.
ಪರ್ಯಾಯ ಮಹೋತ್ಸವದ ವೈಭೋಗಗಳ ಪೈಕಿ ಸಾಂಪ್ರದಾಯಿಕವಾಗಿರುವುದನ್ನು ಮಾತ್ರ ನಡೆಸಿಕೊಂಡು ಬರೋಣ. ಉಳಿದ ಕಾಲದಲ್ಲಿ ಬಂದಂತಹ ಆಚರಣೆಗಳನ್ನು ಕೈಬಿಟ್ಟು, ಮುಖ್ಯವಾದದ್ದನ್ನು ಮಾತ್ರ ಆಚರಿಸೋಣ. ಇದರಿಂದ ದೇವರ ಆರಾಧನೆಯ ಜೊತೆಗೆ ಜನರ ಆರೋಗ್ಯವನ್ನು ಕಾಪಾಡಿದಂತೆ ಆಗುತ್ತದೆ. ಸರ್ಕಾರದ ಜೊತೆ ಸಹಕಾರಿಸಿದಂತೆಯೂ ಆಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.












