ರಾಜ್ಯ: ಮಳೆಗಾಲದಲ್ಲಿಯೇ ರಾಜ್ಯದ ವಿವಿದೆಡೆ ನೀರಿನ ಸಮಸ್ಯೆ ಉದ್ಭವಿಸಿದೆ. ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ರಾಜ್ಯದ ಬಹುತೇಕ ಕೆರೆ, ನದಿಗಳು ತುಂಬಿಲ್ಲ. ಶೇ.70ರಷ್ಟುಕೆರೆಗಳು ನೀರಿಲ್ಲದೇ ಕಂಗಾಲಾಗಿ ಕೂತಂತಿದೆ. ರಾಜ್ಯದ 25 ಜಿಲ್ಲೆಗಳ 1,323 ಗ್ರಾಮಗಳಿಗೆ ನಿತ್ಯ 2,237 ಟ್ಯಾಂಕರ್ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು ಮಳೆಗಾಲದಲ್ಲಿಯೇ ಈ ರೀತಿ ನೀರಿಗೆ ಬರ ಬಂದರೆ ಬೇಸಿಗೆಯ ಪರಿಸ್ಥಿತಿ ಹೇಗಿರಬಹುದೆನ್ನುವ ಚಿತ್ರಣ ಈಗಾಗಲೇ ಭಯ ಹುಟ್ಟಿಸಿದೆ.
ಈಗಲೇ ಹೀಗಾದರೆ?
ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು ಮತ್ತು ಚಾಮರಾಜನಗರ ಪರಿಸ್ಥಿತಿ ಅಷ್ಟೇನೂ ಕೆಟ್ಟದಾಗಿಲ್ಲವಾದರೂ, ಇಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿರುವುದು ಬೇಸಿಗೆಯ ಬಗ್ಗೆ ಚಿಂತೆ ಮಾಡುವಂತೆ ಮಾಡಿದೆ.
ರಾಜ್ಯದ ಎಲ್ಲ 25 ಜಿಲ್ಲೆಗಳ 1,323 ಗ್ರಾಮಗಳಿಗೆ 2,237 ಟ್ಯಾಂಕರ್ಗಳ ಮೂಲಕ 5,748 ಟ್ಯಾಂಕ್ ನೀರು ಪೂರೈಸಬೇಕಾದ ಪರಿಸ್ಥಿತಿ ಇದೆ. ಕೆಲವೆಡೆ ಜಿಲ್ಲಾಡಳಿತವು 2,302 ಖಾಸಗಿ ಕೊಳವೆ ಬಾವಿಗಳ ಮೊರೆ ಹೋಗಿದೆ. ಇನ್ನು ಕೆಲವು ದಿನಗಳಲ್ಲಿ ಮುಂಗಾರು ಚುರುಕಾಗಬಹುದು ಎನ್ನುವ ನಿರೀಕ್ಷೆ ಇದ್ದರೂ ನೀರಿನ ಸಮಸ್ಯೆ ನಿವಾರಣೆ ಆಗೋದು ಕಷ್ಟವೇನೋ ಎನ್ನುವುದು ಜನರ ಅಭಿಪ್ರಾಯ.