ಮೈಸೂರು: ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಬೀದಿಗಳಲ್ಲಿ ಗಜಗಾಂಭೀರ್ಯದಿಂದ ಸಾಗುತ್ತಿದ್ದ ಬಲರಾಮ (67) ಅಸೌಖ್ಯದಿಂದಾಗಿ ಸಾವನ್ನಪ್ಪಿದ್ದಾನೆ. ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿಯನ್ನು ಹೊತ್ತ ಕೀರ್ತಿ ಹೊಂದಿರುವ ಸೌಮ್ಯ ಸ್ವಭಾವದ ಬಲರಾಮನ ಬಾಯಿಯಲ್ಲಿ ಹುಣ್ಣಾಗಿದ್ದ ಕಾರಣ ಕಳೆದ ಹತ್ತು ದಿನಗಳಿಂದ ಆತ ನೋವಿನಿಂದ ಬಳಲುತ್ತಿದ್ದ ಮತ್ತು ಆತನಿಗೆ ಆಹಾರ ಸೇವಿಸಲಾಗುತ್ತಿರಲಿಲ್ಲ. ಭಾನುವಾರದಂದು ತೀವ್ರ ಅವಸ್ಥನಾಗಿದ್ದ ಅವನನ್ನು ಕೂಡಲೇ ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.
1987 ರಲ್ಲಿ ಕರ್ನಾಟಕದ ಕೊಡಗು ಪ್ರದೇಶದ ಸೋಮವಾರಪೇಟೆ ಬಳಿಯ ಕಟ್ಟೆಪುರ ಅರಣ್ಯದಲ್ಲಿ ಬಲರಾಮನನ್ನು ಸೆರೆಹಿಡಿಯಲಾಗಿತ್ತು. ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರುತ್ತಿದ್ದ ದ್ರೋಣನ ನಿವೃತ್ತಿಯ ನಂತರ ಅರ್ಜುನನ್ನು ಆಯ್ಕೆ ಮಾಡಲಾಗಿತ್ತಾದರೂ ಆತನು ಆಕಸ್ಮಿಕವಾಗಿ ಮಾವುತನನ್ನು ಕೊಂದಿದ್ದರಿಂದಾಗಿ ಬಲರಾಮ ಈ ಜವಾಬ್ದಾರಿಯನ್ನು ಹೊತ್ತಿದ್ದನು. ಅಲ್ಲಿಂದ ಮುಂದೆ 1999 ರಿಂದ 2011 ರ ನಡುವೆ ಒಟ್ಟು 14 ಬಾರಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿದ್ದ ಬಲರಾಮ ದೇವರ ಪಾದ ಸೇರಿದ್ದಾನೆ.
ಸಮಸ್ತ ಕನ್ನಡಿಗರೂ ಬಲರಾಮನಿಗೆ ಭಾವಪೂರ್ಣ ವಿದಾಯ ಸಲ್ಲಿಸುತ್ತಿದ್ದಾರೆ.