ಗಗನಕ್ಕೇರಿದ ಹಸಿರು ಸೊಪ್ಪಿನ ಬೆಲೆ: ಹೈರಾಣಾದ ಗ್ರಾಹಕರು

ಉಡುಪಿ: ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಭಾರೀ ಮಳೆಯು ತರಕಾರಿಗಳ ಬೆಲೆಯನ್ನು ಹೆಚ್ಚಿಸಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಹಾವಳಿಯಿಂದಾಗಿ ಹಸಿರು ಸೊಪ್ಪು ತರಕಾರಿಗಳು ಹೆಚ್ಚು ಹಾನಿಗೊಳಗಾಗಿವೆ. ಪ್ರವಾಹದಿಂದಾಗಿ ಅನೇಕ ಸಣ್ಣ ಮಾರುಕಟ್ಟೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿರುವುದರಿಂದ ದೊಡ್ಡ ಮಾರುಕಟ್ಟೆಗಳಿಗೆ ತಾಜಾ ತರಕಾರಿಗಳು ಬರುತ್ತಿಲ್ಲ.

ಇನ್ನೂ ಕೆಲವು ವಾರಗಳವರೆಗೆ ಈ ಕೊರತೆ ಮುಂದುವರಿಯುವ ಸಾಧ್ಯತೆಯಿದ್ದು, ತರಕಾರಿ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗುವ ಲಕ್ಷಣಗಳಿಲ್ಲ. ಇನ್ನೇನು ಸ್ವಲ್ಪ ದಿನಗಳಲ್ಲೇ ನವರಾತ್ರಿ ಹಬ್ಬ ಮತ್ತು ಮದುವೆ ಸಮಾರಂಭಗಳು ಶುರುವಾಗಲಿದ್ದು, ತರಕಾರಿ ಬೆಲೆಗಳು 100 ರ ಗಡಿ ದಾಟಲಿವೆ ಎಂದು ಅಂದಾಜಿಸಲಾಗಿದೆ.

ಕಳೆದ ವಾರ ಸುರಿದ ಮಳೆಯಿಂದಾಗಿ ಬಹುತೇಕ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ದೊಡ್ಡ ಮಂಡಿಗಳಿಂದ ನಮಗೆ ತಾಜಾ ಸ್ಟಾಕ್ ಸಿಗುತ್ತಿಲ್ಲ. ನಮಗೆ ತರಕಾರಿಗಳನ್ನು ಪೂರೈಸುತ್ತಿದ್ದ ಅನೇಕ ಸಣ್ಣ ಮಾರುಕಟ್ಟೆಗಳು ಪೂರೈಕೆಯ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಬಹುತೇಕ ಸೊಪ್ಪುಗಳು ದುಬಾರಿಯಾಗಿವೆ. ವಾರದ ಹಿಂದೆ ಒಂದು ಕೊತ್ತಂಬರಿ ಸೊಪ್ಪಿನ ಕಟ್ಟು 20 ರೂ.ಗೆ ಮಾರಾಟ ಮಾಡುತ್ತಿದ್ದೆವು. ಈಗ ಅದೇ ಮೂಟೆಗೆ 40 ರೂ. ಆಗಿದೆ” ಎಂದು ಬೆಂಗಳೂರು ಮಿರರ್‌ಗೆ ತರಕಾರಿ ಮಾರಾಟಗಾರರು ವಾರದ ಹಿಂದೆಯೇ ತಿಳಿಸಿದ್ದರು.

ಉಡುಪಿಯಲ್ಲಿ ಆದಿ ಉಡುಪಿ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರದಂದು ಕೊತ್ತಂಬರಿ ಸೊಪ್ಪು ಕಿಲೋ ಒಂದಕ್ಕೆ 200 ರೂಪಾಯಿಗಳಂತೆ ಮಾರಾಟವಾಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸಿದೆ. ಹೋಟೆಲ್ ಮಾಲಕರು, ಊಟೋಪಚಾರ ವ್ಯಾಪಾರದಲ್ಲಿ ತೊಡಗಿರುವವರು ಮತ್ತು ಗೃಹಿಣಿಯರು ಹೆಚ್ಚುತ್ತಿರುವ ಸೊಪ್ಪಿನ ಬೆಲೆಯಿಂದಾಗಿ ಹೈರಾಣಾಗಿದ್ದಾರೆ.

ಕರ್ನಾಟಕ ಸ್ಥಳೀಯ ಮಾರುಕಟ್ಟೆಗಳಲ್ಲಿ ಸೊಪ್ಪಿನ ಬೆಲೆ ಪ್ರಬೇಧಗಳ ಆಧಾರದಲ್ಲಿ ಪ್ರತಿ ಕ್ವಿಂಟಲ್ ಗೆ ಕನಿಷ್ಠ 800.00 ರೂ ನಿಂದ ಗರಿಷ್ಟ 1000.೦೦ ರೂಗೆ ಮಾರಾಟವಾಗುತ್ತಿದ್ದು, ಪ್ರತಿ ಕ್ವಿಂಟಲ್ ಗೆ ಸರಾಸರಿ 900.00 ರೂ ನಂತೆ ಮಾರಾಟವಾಗುತ್ತಿದೆ.