ನವದೆಹಲಿ: 10 ವರ್ಷಗಳ ಕಾಲ ಸ್ಟಾಕ್ ಮಾರುಕಟ್ಟೆಯನ್ನು ಆಳಿದ ತಂತ್ರಜ್ಞಾನ ಕಂಪನಿಗಳು ಹೊಸ ವಾಸ್ತವಕ್ಕೆ ಹೊಂದಿಕೊಳ್ಳುತ್ತಿರುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತಗಳು ಹೆಚ್ಚಾಗುತ್ತಿವೆ. ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಅದರ ಹೊಸ ಬಾಸ್ ಎಲೋನ್ ಮಸ್ಕ್ ತನ್ನ ಕಂಪನಿಯ ಅರ್ಧದಷ್ಟು ಉದ್ಯೋಗಿಗಳನ್ನು ಕಂಪನಿಯಿಂದ ಹೊರಕಳಿಸಿದ್ದಾರೆ. ಫೇಸ್‌ಬುಕ್ ಪೋಷಕ ಕಂಪನಿ ಮೆಟಾದ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಇದುವರೆಗಿನ ಅತಿ ಹೆಚ್ಚಿನ ವಜಾಗಳನ್ನು ಘೋಷಿಸಿದೆ. ಮೆಟಾ ತನ್ನ 13% ಸಿಬ್ಬಂದಿಯನ್ನು ತೆಗೆದುಹಾಕುತ್ತಿದೆ ಎಂದು ಬುಧವಾರ ಹೇಳಿದ್ದು, ಇದರಿಂದ11,000 ಕ್ಕೂ ಹೆಚ್ಚು ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಕಳೆದ ತಿಂಗಳು, ಮೆಟಾ ಎರಡನೇ ನೇರ ತ್ರೈಮಾಸಿಕದಲ್ಲಿ ಇಳಿಕೆಯಾಗುತ್ತಿರುವ ತನ್ನ ಆದಾಯವನ್ನು ಘೋಷಿಸಿತು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಮತ್ತೊಂದು ಕುಸಿತವನ್ನು ಅದು ಎದುರು ನೋಡುತ್ತಿದೆ. ಹೆಚ್ಚುತ್ತಿರುವ ಹಣದುಬ್ಬರವು ಗ್ರಾಹಕರ ಖರ್ಚನ್ನು ತಡೆಯುವುದರಿಂದ ಡಿಜಿಟಲ್ ಜಾಹೀರಾತುದಾರರು ಖರ್ಚನ್ನು ಕಡಿತಗೊಳಿಸುತ್ತಿದ್ದಾರೆ. ಐಒಎಸ್ ಫೋನ್ ಗಳ ಗೌಪ್ಯತೆ ನವೀಕರಣವು ಜಾಹೀರಾತು ಗುರಿಯನ್ನು ಸೀಮಿತಗೊಳಿಸಿರುವುದರಿಂದ ಫೇಸ್ ಬುಕ್ ನಂತಹ ಅಪ್ಲಿಕೇಶನ್‌ಗಳು ಜಾಹೀರಾತಿಲ್ಲದೆ ಬಳಲುತ್ತಿವೆ.
2022 ರಲ್ಲಿ ಅನಿಶ್ಚಿತ ಆರ್ಥಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ತಂತ್ರಜ್ಞಾನ ಉದ್ಯಮವು ವಜಾಗೊಳಿಸುವಿಕೆಯ ಸರಮಾಲೆಯನ್ನು ವ್ಯಾಪಕವಾಗಿ ಕಂಡಿದೆ. ಇದರ ಜೊತೆಗೆ ಕಂಪನಿಗಳ ಪುನರ್ ರಚನೆ ಮತ್ತು ಅಸಮರ್ಥ ನೌಕರರಿಂದಾಗಿಯೂ ಉದ್ಯೋಗ ಕಡಿತಗಳನ್ನು ಮಾಡಲಾಗುತ್ತಿದೆ.
ಮೆಟಾ: ಸುಮಾರು 11,000 ಉದ್ಯೋಗ ಕಡಿತ, ಟ್ವಿಟರ್: ಸುಮಾರು 3,700 ಉದ್ಯೋಗ ಕಡಿತ, ಲಿಫ್ಟ್: ಸುಮಾರು 700 ಉದ್ಯೋಗ ಕಡಿತ, ಶಾಪಿಫೈ: ಸುಮಾರು 1,000 ಉದ್ಯೋಗ ಕಡಿತ, ನೆಟ್‌ಫ್ಲಿಕ್ಸ್: ಸುಮಾರು 450 ಉದ್ಯೋಗ ಕಡಿತ, ಮೈಕ್ರೋಸಾಫ್ಟ್: 1,000 ಕ್ಕಿಂತ ಕಡಿಮೆ ಉದ್ಯೋಗ ಕಡಿತ, ಟೆಸ್ಲಾ: ಸಂಬಳದ ಉದ್ಯೋಗಿಗಳಲ್ಲಿ 10% ಕಡಿತ, ವಾಣಿಜ್ಯ ದೈತ್ಯ ಅಮೆಜಾನ್ ಕಂಪನಿಯ ರೊಬೊಟಿಕ್ಸ್ ವಿಭಾಗದಿಂದ ಕನಿಷ್ಠ 3,766 ಜನರಿಗೆ ಗುಲಾಬಿ ಚೀಟಿ ನೀಡಲಾಗಿದೆ ಎನ್ನುವ ವರದಿಗಳೂ ಹರಿದಾಡುತ್ತಿವೆ.
ಭಾರತದಲ್ಲಿಯೂ ಹಲವಾರು ಸ್ಟಾರ್ಟ್ ಅಪ್ ಕಂಪನಿಗಳೂ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿ ನಗದು ಉಳಿಸಿ ಲಾಭದಾಯಕತೆಯನ್ನು ಹೆಚ್ಚಿಸುವತ್ತ ಗಮನಹರಿಸಿದೆ ಎಂದು ವರದಿಯಾಗಿದೆ.