ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆ? ಮುಗಿಯುವುದೆ ಶತಮಾನಗಳಿಂದ ಕಾಯುತ್ತಿರುವ ನಂದಿಯ ಪ್ರತೀಕ್ಷೆ?

ಉತ್ತರಪ್ರದೇಶ: ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆಯ ಕೊನೆಯ ದಿನ, ಬಾವಿಯೊಳಗೆ ಶಿವಲಿಂಗ ಕಂಡುಬಂದಿದೆ ಎಂದು ವಕೀಲ ವಿಷ್ಣು ಜೈನ್ ಪ್ರತಿಪಾದಿಸಿದ್ದಾರೆ. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಎನ್ನಲಾಗಿದೆ.

ಆಜ್ ತಕ್/ಇಂಡಿಯಾ ಟುಡೇ ಟಿವಿ ಜೊತೆ ಫೋನ್ ಮೂಲಕ ಶಿವಲಿಂಗದ ಬಗ್ಗೆ ಮಾತನಾಡಿದ ಜೈನ್, ಅದರ ರಕ್ಷಣೆಗಾಗಿ ನಾಗರಿಕ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ. ಇದಾದ ಕೆಲವೇ ಗಂಟೆಗಲ್ಲಿ ನಾಗರಿಕ ನ್ಯಾಯಾಲಯವು ವಿವಾದಿತ ಪ್ರದೇಶವನ್ನು ಸೀಲ್ ಮಾಡಿ ಜನರ ಪ್ರವೇಶವನ್ನು ನಿಷೇಧಿಸಲು ಆದೇಶ ನೀಡಿದೆ.

ಹಿಂದೂ ಪರ ವಕೀಲರಾದ ಮದನ್ ಮೋಹನ್ ಯಾದವ್ ಪ್ರಕಾರ ಶಿವಲಿಂಗವು ನಂದಿಯೆಡೆಗೆ ಮುಖಮಾಡಿದೆ.

ಮಸೀದಿಯ ಆವರಣದ ಛಾಯಾಗ್ರಾಹಕ ಗಣೇಶ್ ಶರ್ಮಾ ಅವರನ್ನು ಶಿವಲಿಂಗದ ಬಗ್ಗೆ ಕೇಳಿದಾಗ ಅವರು ಈ ಬಗ್ಗೆ ತನಗೇನು ತಿಳಿದಿಲ್ಲ ಎಂದು ಉತ್ತರ ನೀಡಿದ್ದಾರೆ. “ನಾವು ವೀಡಿಯೋ ಮಾಡಿರುವ ಬಗ್ಗೆ ಮಾತನಾಡಬಾರದು ಎಂದು ಹೇಳಲಾಗಿದೆ. ಶಿವಲಿಂಗದ ಬಗ್ಗೆ ಹೇಳಿಕೊಳ್ಳುವ ಜನರು ಸಾಕಷ್ಟು ಜವಾಬ್ದಾರರಾಗಿರಬೇಕು. ನಾನು ಏನು ಹೇಳಬಲ್ಲೆ, ಸತ್ಯವು ಗೆಲ್ಲುತ್ತದೆ.”ಎಂದು ಅವರು ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

ಸುದ್ದಿ ಕೇಳಿ ಅರ್ಜಿದಾರ ಸೋಹನ್ ಲಾಲ್ ಆರ್ಯ “ಬಾಬಾ ಮಿಲ್ ಗಯೇ…ಜಿಸ್ ಕೀ ನಂದಿ ಪ್ರತೀಕ್ಷಾ ಕರ್ ರಹೀ ಥೀ” ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.

ಪ್ರತಿವಾದದಲ್ಲಿ, ಮುಸ್ಲಿಂ ಕಡೆಯ ವಕೀಲ ಮಿರಾಜುದ್ದೀನ್,ಈ ಪ್ರತಿಪಾದನೆ ತಪ್ಪು ಎಂದರೆ, ಮತ್ತೊಬ್ಬ ವಕೀಲ ಅಭಯ್ ನಾಥ್ ಯಾದವ್, ವಿಷ್ಣು ಶಂಕರ್ ಅವರನ್ನು ಕೇಳುವುದು ಒಳಿತು ಎಂದಿದ್ದಾರೆ. ಸುದ್ದಿಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಟ್ವೀಟ್‌ನಲ್ಲಿ, ಜ್ಞಾನವಾಪಿ ಮಸೀದಿಯಾಗಿತ್ತು ಮತ್ತು ಯಾವಾಗಲೂ ಅದೇ ಆಗಿರುತ್ತದೆ ಎಂದಿದ್ದಾರೆ.

Source: India Today