ಅಮೇರಿಕಾದ ನ್ಯೂಜೆರ್ಸಿಯಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಉದ್ಘಾಟನೆ

ಯುನೈಟೆಡ್ ಸ್ಟೇಟ್ಸ್ ನ ಅತಿದೊಡ್ಡ ಹಿಂದೂ ದೇವಾಲಯವು ನ್ಯೂಜೆರ್ಸಿಯಲ್ಲಿ ಭಾನುವಾರ ತನ್ನ ಬಾಗಿಲನ್ನು ಭಕ್ತರಿಗಾಗಿ ತೆರೆದಿದೆ. ರಾಬಿನ್ಸ್‌ವಿಲ್ಲೆಯ ಸಣ್ಣ ಟೌನ್‌ಶಿಪ್‌ನಲ್ಲಿ 183-ಎಕರೆ ಜಾಗದಲ್ಲಿ BAPS ಸ್ವಾಮಿನಾರಾಯಣ ಅಕ್ಷರಧಾಮ ಮಂದಿರವನ್ನು ಲೋಕಾರ್ಪಣೆ ಮಾಡಲಾಗಿದೆ.

Image

ಅಕ್ಟೋಬರ್ 8 ರಂದು ದೇವಾಲಯ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಅ.18 ರಿಂದ ಸಾರ್ವಜನಿಕರಿಗೆ ಪ್ರವೇಶ ದೊರೆಯಲಿದೆ. ಭಾರತೀಯ ಅಮೆರಿಕನ್ನರು ಮತ್ತು ಹಿಂದೂ ಅಮೆರಿಕನ್ನರಿಗೆ, ಇದು ಒಂದು ದೊಡ್ಡ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ.

ಪ್ರಪಂಚದಾದ್ಯಂತದ 12,500 ಸ್ವಯಂಸೇವಕರಿಂದ ನಿರ್ಮಿಸಲಾದ ಅಕ್ಷರಧಾಮದ ಕಾಮಗಾರಿಯು 2011 ರಲ್ಲಿ ಪ್ರಾರಂಭವಾಗಿತ್ತು. ಭವ್ಯ ಮಂದಿರವು ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸಲಿದೆ. ದೇವಾಲಯದ ಗೋಡೆಗಳ ಉದ್ದಕ್ಕೂ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಅಬ್ರಹಾಂ ಲಿಂಕನ್ ಅವರಂತಹ ಐತಿಹಾಸಿಕ ವ್ಯಕ್ತಿಗಳ ಕೆತ್ತನೆಗಳಿವೆ.

ನ್ಯೂಜೆರ್ಸಿಯ ಚಳಿಗಾಲವನ್ನು ತಡೆದುಕೊಳ್ಳಲು, ದೇವಾಲಯದ ಹೊರಭಾಗವನ್ನು ಸಾಂಪ್ರದಾಯಿಕವಲ್ಲದ ಬಲ್ಗೇರಿಯನ್ ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಒಳಭಾಗವು ಗ್ರೀಸ್, ಇಟಲಿ ಮತ್ತು ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಕಲ್ಲುಗಳನ್ನು ಹೊಂದಿದೆ ಮತ್ತು ಸಾಂಪ್ರದಾಯಿಕ ಭಾರತೀಯ ಮೆಟ್ಟಿಲುಬಾವಿಯು ಭಾರತದ 300 ಕಡೆ ಮತ್ತು ಎಲ್ಲಾ 50 ಯುಎಸ್ ರಾಜ್ಯಗಳ ನೀರನ್ನು ಒಳಗೊಂಡಿದೆ. ದೇವಾಲಯದ ಕಾಮಗಾರಿಯಲ್ಲಿ ಮಹಿಳೆಯರೂ ವಿಶೇಷ ಪ್ರಾತಿನಿಧ್ಯ ವಹಿಸಿದ್ದಾರೆ.