ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಕಮಲೇಶ್ ಚಂದ್ರ ಸಮಿತಿ ವರದಿಯನ್ನು ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಅಂಚೆ ನೌಕರರ ಸಂಘದ ಉಡುಪಿ ವಿಭಾಗ ವತಿಯಿಂದ ಬುಧವಾರ ಉಡುಪಿಯ ಮುಖ್ಯ ಅಂಚೆ ಕಚೇರಿ ಎದುರು ವಿನೂತನ ಲಂಗೋಟಿ ಪ್ರತಿಭಟನೆ ನಡೆಯಿತು.
ಕೇಂದ್ರ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅಂಚೆ ನೌಕರರ ಬೇಡಿಕೆ ಈಡೇರಿಸದೆ ವಂಚಿಸುತ್ತಿದೆ ಎಂದು ಟೀಕಿಸುವ ರೀತಿಯಲ್ಲಿ ಅಂಚೆ ನೌಕರ ರಾಘವೇಂದ್ರ ಪ್ರಭು ಮುಖದ ಅರ್ಧ ಭಾಗಕ್ಕೆ ಕಪ್ಪು ಬಣ್ಣವನ್ನು ಹಚ್ಚಿ, ಕಿವಿಗಳಿಗೆ ಹೂವು ಇಟ್ಟು ಹಾಗೂ ಪ್ಯಾಂಟ್ ಮೇಲೆ ಲಂಗೋಟಿ ತೊಟ್ಟುಕೊಂಡು ವಿಭಿನ್ನ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
ಸಂಘದ ರಾಜ್ಯಾಧ್ಯಕ್ಷ ವಿಜಯ ನಾಯರಿ ಮಾತನಾಡಿ, ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರ ಬೇಕು. ಕಮಲೇಶ್ ಚಂದ್ರ ಸಮಿತಿ ವರದಿಯನ್ನು ಜಾರಿಗೆ ತಂದು ಗ್ರಾಮೀಣ ಡಾಕ್ ನೌಕರರನ್ನು ಶಾಶ್ವತ ನೌಕರನ್ನಾಗಿ ಪರಿಗಣಿಸಬೇಕು. ಅಂಚೆ ಇಲಾಖೆಯ ಖಾಸಗೀಕರಣ ಹಾಗೂ ಹೊರಗುತ್ತಿಗೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸುರೇಶ್ ಕೆ., ವಾಸುದೇವ ತೊಟ್ಟಂ, ಎಚ್.ಉಮೇಶ್ ನಾಯ್ಕ, ಎನ್.ಎ.ನೇಜಾರು, ಅಶ್ವಥ್ ಕುಮಾರ್, ಸುಭಾಶ್ ತಿಂಗಳಾಯ, ಕೃಷ್ಣ ಶೆಟ್ಟಿಗಾರ್, ನರಸಿಂಹ ನಾಯ್ಕಿ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.