ಉಡುಪಿ: ಜಗತ್ತಿನ ಎಲ್ಲ ದೇಶಗಳಿಗೂ ಕೊರೊನಾ ಸೋಂಕು ಕಂಟಕವಾಗಿ ಪರಿಣಮಿಸಿದ್ದು, ಇದರಿಂದ ತಮ್ಮ ದೇಶವನ್ನು ರಕ್ಷಿಸಲು ಹಲವಾರು ಕ್ರಮಗಳನ್ನು ಕೈಗೊಳುತ್ತಿವೆ. ಅದರಂತೆ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕುವೈತ್ ಭಾರತ ಸೇರಿದಂತೆ ಹೆಚ್ಚು ಸೋಂಕು ಪ್ರಕರಣಗಳಿರುವ 31 ದೇಶಗಳಿಗೆ ವಿಮಾನ ಸಂಚಾರವನ್ನು ನಿಷೇಧಿಸಿದೆ.
ಭಾರತ, ಸಿಂಗಾಪುರ, ಇಟಲಿ, ಸಪೇನ್, ಹಾಂಕಾಂಗ್, ಚೀನಾ, ಶ್ರೀಲಂಕಾ, ನೇಪಾಳ, ಮೆಕ್ಸಿಕೊ, ಇಂಡೋನೇಷ್ಯಾ, ಚಿಲಿ, ಪಾಕಿಸ್ತಾನ, ಈಜಿಪ್ಟ್, ಇರಾನ್, ಬ್ರೆಝಿಲ್, ಕೊಲಂಬಿಯಾ, ಬಾಂಗ್ಲಾದೇಶ ಹಾಗೂ ಫಿಲಿಫಿನ್ಸ್ ಸೇರಿದಂತೆ ಒಟ್ಟು 31 ದೇಶಗಳಿಗೆ ವಿಮಾನ ಸಂಚಾರವನ್ನು ನಿಷೇಧಿಸಿ ಶನಿವಾರ ಆದೇಶ ಹೊರಡಿಸಿದೆ.
ಕೊರೊನಾ ಸಂಕಷ್ಟದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಟ್ರಾನ್ಸ್ಪೋರ್ಟ್ ಬಬಲ್ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ವಿಮಾನಯಾನ ಇಲಾಖೆ ತಿಳಿಸಿತ್ತು. ಆದರೆ ಕುವೈತ್ ದೇಶ ಹೊರಡಿಸಿರುವ ಆದೇಶದಿಂದ ಭಾರತೀಯ ವಿಮಾನಯಾನ ಇಲಾಖೆಯ ವಿಶೇಷ ಪ್ರಯಾಣ ಒಪ್ಪಂದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


















