ಹೆಣ್ಣಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ: ಡಾ| ವಿಜಯಲಕ್ಷ್ಮೀ

ಕುಂದಾಪುರ: ಹೆಣ್ಣು ಸಂಸಾರದ ಕಣ್ಣು. ತಮ್ಮ ಜೀವನದಲ್ಲಿ ಎದುರಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಪ್ರತಿಯೊಬ್ಬ ಮಹಿಳೆ ಕೂಡ ಸಾಧಕಿಯೇ. ಹೆಣ್ಣಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ ಎಂದು ಡಾ| ವಿಜಯಲಕ್ಷ್ಮೀ ಹೇಳಿದರು.
ಅವರು ಬಿಜೆಪಿ ಮಹಿಳಾ ಮೋರ್ಚಾ ಕುಂದಾಪುರದ ವತಿಯಿಂದ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗುಣರತ್ನಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಸಮಾಜ ಸೇವೆಯಲ್ಲಿ ನೀರಮ್ಮ ಖ್ಯಾತಿಯ ಪದ್ಮಮ್ಮ ಕೋಟೇಶ್ವರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ| ವಿಜಯಲಕ್ಷ್ಮೀ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿ ಸುಗುಣ ಅವರನ್ನು ಸಮ್ಮಾನಿಸಲಾಯಿತು.
ಜಿ.ಪಂ. ಸದಸ್ಯರಾದ ಸುಪ್ರೀತಾ ಉದಯ ಕುಲಾಲ್, ಲಕ್ಷ್ಮಿ ಮಂಜು ಬಿಲ್ಲವ, ತಾ.ಪಂ. ಸದಸ್ಯೆ ಜ್ಯೋತಿ ಉದಯ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಪ್ರ. ಕಾರ್ಯದರ್ಶಿ ನಿರ್ಮಲಾ ಶೆಟ್ಟಿ ಶಿರಿಯಾರ ಸ್ವಾಗತಿಸಿದರು. ಮಮತಾ ಶೆಟ್ಟಿ, ಚಂದ್ರಲೇಖಾ ಸಮ್ಮಾನಿತರನ್ನು ಪರಿಚಯಿಸಿದರು. ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.