ಕುಂದಾಪುರ: ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಶಾಲೆಗಳು ಬಾಗಿಲು ಮುಚ್ಚಿದ್ದರೂ ಈ ಶಾಲೆಯಲ್ಲಿ ಹೊಸ ಹೊಸ ತಂತ್ರಜ್ಞಾನದೊಂದಿಗೆ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಲಾಗುತ್ತಿದೆ. ಮನೇಲೇ ಕೂತಿರಿ, ಮನೆಯಿಂದಲೇ ಶಿಕ್ಷಣ ಪಡೆಯಿರಿ ಅನ್ನುವ ಪರಿಕಲ್ಪನೆಯಲ್ಲಿ ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ನ ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆ ಯಶಸ್ವಿ ಶಿಕ್ಷಣ ನೀಡುತ್ತಿದೆ.
ಆನ್ ಲೈನ್ ಎಜುಕೇಶನ್ ವಿದ್ಯಾರ್ಥಿಗಳಿಗಿಲ್ಲ ಟೆನ್ಶನ್:
ಇದೀಗ ಆನ್ ಲೈನ್ ತರಬೇತಿಗಾಗಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ ಈ ಸಂಸ್ಥೆ. ಬೆಂಗಳೂರು ಮೂಲದ ನೆಕ್ಸ್ಟ್ ಎಲಿಮೆಂಟ್ ಪ್ರೈವೇಟ್ ಲಿಮಿಟೆಡ್ ಸಾಫ್ಟ್ವೇರ್ ಕಂಪನಿಯಿಂದ ಗುರುಕುಲ ಸ್ಕೂಲ್ ಎಲಿಮೆಂಟ್ ಹೆಸರಿನ ಸಾಫ್ಟ್ವೇರ್ ತಯಾರಿಸಿ ಅವರಿಂದ ವಿದ್ಯಾರ್ಥಿಗಳಿಗೆ ಸ್ಕೂಲ್ ಆಫ್ ಎಲಿಮೆಂಟ್ಸ್ ಮೂಲಕ ಆನ್ಲೈನ್ ತರಗತಿ ಆರಂಭಿಸಿದೆ.
500 ವಿದ್ಯಾರ್ಥಿಗಳಿಗೆ ಆವಕಾಶ:
ಎ.20ಕ್ಕೆ ಆರಂಭಿಸಿರುವ ಈ ನೂತನ ತಂತ್ರಜ್ಞಾನದೊಂದಿಗೆ ವಿದ್ಯಾರ್ಥಿಗಳು, ಹೊಂದಿಕೊಳ್ಳಲು ಸಮಯ ಅವಕಾಶ ನೀಡಲಾಗಿದ್ದು, ಮೇ 2ರಿಂದ ಪೂರ್ಣಪ್ರಮಾಣದಲ್ಲಿ ತರಗತಿ ಆರಂಭಕ್ಕೆ ಚಾಲನೆ ನೀಡಲಾಗಿದೆ.
8, 9, 10 ಹಾಗೂ ಪಿಯುಸಿ ತರಗತಿಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ 1ರಿಂದ 7ನೇ ತರಗತಿಯ ತನಕವೂ ಆನ್ ಲೈನ್ ತರಗತಿ ಆರಂಭಿಸುವ ಯೋಜನೆ ಸಂಸ್ಥೆಯದ್ದು. ಪ್ರತಿ ವಿಷಯಕ್ಕೂ ಆನ್ ಲೈನ್ ತರಗತಿ ಬೆಳಗ್ಗೆ 8.30ಕ್ಕೆ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಪ್ರಸ್ತುತ ಸರಿಸುಮಾರು 500 ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯುತ್ತಿರುವುದು ಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಥಮ ಇ-ಶಿಕ್ಷಣ:
ಗುರುಕುಲ ಸಂಸ್ಥೆಯಲ್ಲಿ ವರ್ಚುವಲ್ ಕ್ಲಾಸ್ ರೂಂ ರೀತಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಸಂವಹನಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಪ್ರಶ್ನೆ ಕೇಳುವ ವಿದ್ಯಾರ್ಥಿ ಕ್ಯಾಮೆರಾದ ಮುಂದೆ ತನ್ನ ಕೈಯನ್ನು ಮೇಲೆ ಮಾಡಿದರೆ ಶಿಕ್ಷಕರು ಪ್ರಶ್ನೆಗಾಗಿ ಸಮಯ ನೀಡುತ್ತಾರೆ. ಆ ವೇಳೆಯಲ್ಲಿ ಆ ವಿದ್ಯಾರ್ಥಿ ಪ್ರಶ್ನೆಗಳನ್ನು ಕೇಳಬಹುದು.
ಸ್ಕೂಲ್ ಎಲಿಮೆಂಟ್ಸ್ ಆ್ಯಪ್:
ಗುರುಕುಲ ಶಾಲಾ-ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಪೋಷಕರ ಮೊಬೈಲ್ಗೆ ಸ್ಕೂಲ್ ಎಲಿಮೆಂಟ್ ಆ್ಯಪ್ ನ್ನು ಇನ್ಸ್ಟಾಲ್ ಮಾಡಲಾಗಿದ್ದು, ಇದೆ ಆ್ಯಪ್ ನಲ್ಲಿ ವಿದ್ಯಾರ್ಥಿಗಳು ದಿನ ನಿತ್ಯ ಪಾಠ ಆಲಿಸುತ್ತಿದ್ದಾರೆ. ಮೊಬೈಲ್ ಮಾತ್ರವಲ್ಲದೆ ಲ್ಯಾಪ್ಟಾಪ್, ಟ್ಯಾಬ್ ಮುಂತಾದವುಗಳಿಂದಲೂ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.
ಪೋಷಕರಿಗೆ ಹೊರೆಯಿಲ್ಲ:
‘ನಾವು ಒಂದು ಹೆಜ್ಜೆ ಮುಂದೆಹೋಗಿ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಹೇಗೆ ಪಾಠ ಮಾಡಲಾಗುತ್ತೊ ಅದೇ ರೀತಿಯ ವಾತಾವರಣ ಕಲ್ಪಿಸಬೇಕೆಂದು ವರ್ಚುವಲ್ ಕ್ಲಾಸ್ರೂಮ್ ಆರಂಭಕ್ಕೆ ಮುಂದಾಗಿದ್ದೇವೆ. ಶಿಕ್ಷಕರು ವಿದ್ಯಾರ್ಥಿಗಳ ಸಂವಹನಕ್ಕಾಗಿ ದುಬಾರಿ ವೆಚ್ಚದ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ಪೋಷಕರಿಗೆ ಹೊರೆಯಾಗದೆ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತಿದ್ದೇವೆ ಎನ್ನುತ್ತಾರೆ’.
-ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ
ಗುರುಕುಲ ಸಂಸ್ಥೆಯ ಜಂಟಿ ನಿರ್ದೇಶಕ