ಕುಂದಾಪುರ: ಭಾರತದ ಗಡಿಗಳಲ್ಲಿ ಸಂಭವಿಸುತ್ತಿರುವ ಅನಾಹುತಗಳನ್ನು ಕಂಡು ಇಂದಿನ ಯುವಕರು ದೇಶ ಕಾಯುವ ಯೋಧರಾಗಲು ಮುಂದೆ ಬರುತ್ತಿಲ್ಲ. ನಮ್ಮ ದೇಶದಲ್ಲಿ ಒಗ್ಗಟ್ಟಿಲ್ಲದೆ ಪದೇ ಪದೇ ಪಾಕಿಸ್ತಾನ ಈ ರೀತಿಯ ದಾಳಿಗಳನ್ನು ನಡೆಸುತ್ತಿದೆ. ಎದುರಾಳಿಗಳಿಗೆ ಭಯ ಹುಟ್ಟಿಸಲು ಸರ್ಜಿಕಲ್ ಸ್ಟ್ರೈಕ್ ಅಥವಾ ಪಾಕಿಸ್ತಾನದೊಂದಿಗೆ ಯುದ್ದ ನಡೆಯಲೇಬೇಕು ಎಂದು ನಿವೃತ್ತ ಯೋಧ ಬಸ್ರೂರು ಗಣಪತಿ ಖಾರ್ವಿ ಗುಡುಗಿದ್ದಾರೆ.
ಅವರು ಇತ್ತೀಚೆಗೆ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ವೀರ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿ ವಿದ್ಯಾರಂಗ ಮಿತ್ರ ಮಂಡಳಿ, ಮಹಾಕಾಳಿ ದೇಸ್ಥಾನದ ಆಡಳಿತ ಮಂಡಳಿ, ಮಹಾಕಾಳಿ ಮಹಿಳಾ ಮಂಡಳಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಗಡಿಗಳಲ್ಲಿ ನಮ್ಮ ಯೋಧರು ಸಾವನ್ನಪ್ಪುತ್ತಿದ್ದಾರೆ. ಎದುರಾಳಿ ಪಾಕಿಸ್ತಾನವನ್ನು ನಾವು ಇದೇ ರೀತಿ ಬಿಡುತ್ತಾ ಹೋದರೆ ಮುಂದೊಂದು ದಿನ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಸರ್ಜಿಕಲ್ ಸ್ಟ್ರೈಕ್ ಮಾಡಲು ಭಾರತ ಸೇನೆಗೆ ಒಪ್ಪಿಗೆಯನ್ನು ಕೊಡಬೇಕು, ಇಲ್ಲವಾದರೆ ಪಾಕಿಸ್ತಾನದೊಂದಿಗೆ ಯುದ್ದ ಘೋಷಣೆ ಮಾಡಲೇಬೇಕು ಎಂದರು.
ಬಳಿಕ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದಿಂದ ಕುಂದಾಪುರದ ಪ್ರಮುಖ ರಸ್ತೆಯಲ್ಲಿ ಮೊಂಬತ್ತಿ ಬೆಳಗಿ ಮೆರವಣಿಗೆ ನಡೆಸಿದ ಖಾರ್ವಿ ಸಮಾಜದವರು ಶಾಸ್ತ್ರೀ ಸರ್ಕಲ್ ಸುತ್ತುವರಿದು ಮತ್ತೆ ಪುನಃ ಮಹಾಕಾಳಿ ದೇವಸ್ಥಾನಲ್ಲಿ ಶ್ರದ್ದಾಂಜಲಿ ಸಭೆ ನಡೆಸಿದರು.
ಖಾರ್ವಿ ಸಮಾಜದ ಪ್ರಮುಖರಾದ ಚಂದ್ರಶೇಖರ ಖಾರ್ವಿ, ದಯಾನಂದ ಖಾರ್ವಿ, ವಸಂತಿ ಸಾರಂಗ, ಸುನೀಲ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.