ಕುಂದಾಪುರ ಶಾಸ್ತ್ರೀ ಸರ್ಕಲ್ ಕಂಪ್ಲೀಟ್ ಆದ್ಮೇಲೆ ಉದ್ಘಾಟನೆ: ಶೋಭಾ ಕರಂದ್ಲಾಜೆ

ಕುಂದಾಪುರ: ಹಲವು ಪ್ರತಿಭಟನೆಗಳ ಬಳಿಕ ಕಳೆದ ಕೆಲ ದಿನಗಳಿಂದ ವೇಗವಾಗಿ ಸಾಗುತ್ತಿರುವ ಇಲ್ಲಿನ ಶಾಸ್ತ್ರೀ ಸರ್ಕಲ್ ಫ್ಲೈಓವರ್ ಕಾಮಗಾರಿಯನ್ನು ಶುಕ್ರವಾರ ಬೆಳಿಗ್ಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಶಾಸ್ರ್ತೀ ಸರ್ಕಲ್ ಫ್ಲೈಓವರ್ ಉದ್ಘಾಟನೆ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದೆ ಶೋಭಾ ಕರಂದ್ಲಾಜೆ, ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಲಾಗುವುದು ಎಂದು ಜಾಣ್ಮೆಯ ಉತ್ತರ ನೀಡಿದರು.

ಏಪ್ರಿಲ್ ಮೊದಲಿಗೆ ಪೂರ್ಣ:
ಬಳಿಕ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿ ಇಂಜಿನಿಯರ್ ರಾಘವೇಂದ್ರ ಅವರ ಜೊತೆ ಸಮಾಲೋಚನೆ ನಡೆಸಿದ ಸಂಸದೆ, ಫ್ಲೈಓವರ್ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆಯಲ್ಲಿ ಶಾಸ್ತ್ರೀ ಸರ್ಕಲ್ ಫ್ಲೈಓವರ್ ಕಾಮಗಾರಿ ಏಪ್ರಿಲ್ ಮೊದಲಿಗೆ ಹಾಗೂ ಬಸ್ರೂರು ಅಂಡರ್‍ಪಾಸ್ ಕಾಮಗಾರಿಯನ್ನು ಜೂನ್ ಮೊದಲಿಗೆ ಪೂರ್ಣಗೊಳಿಸುವುದಾಗಿ ನವಯುಗ ಇಂಜಿನಿಯರ್ ರಾಘವೇಂದ್ರ ಹೇಳಿದರು.

ಹರೀಶ್ ಬಂಗೇರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಂಸದೆ ಶೋಭಾ, ಹರೀಶ್ ಬಂಗೇರ ಅವರ ಮೇಲಿರುವ ಪ್ರಕರಣ ಬಲವಾಗಿದೆ. ಅವರ ಹೆಸರಲ್ಲಿ ಖಾತೆ ಸೃಷ್ಠಿಸಿ ಯಾರು ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆನ್ನುವುದು ಪೊಲೀಸ್ ಇಲಾಖೆ ಪತ್ತೆ ಮಾಡುತ್ತಿದೆ. ಈ ಬಗ್ಗೆ ತನಿಖೆಯೂ ಪ್ರಗತಿಯಲ್ಲಿದೆ. ಆದಷ್ಟು ಬೇಗ ಇದನ್ನು ಪತ್ತೆ ಹಚ್ಚಬೇಕು. ಹರೀಶ್ ಬಂಗೇರ ಅವರನ್ನು ಆರೋಪಿಯಾಗಿ ಮಾಡಿದರೆ ಸಮಸ್ಯೆಯಾಗುತ್ತೆ ಎಂದು ಎಸ್ಪಿಯವರಿಗೆ ಹೇಳಿದ್ದೇನೆ. ಬೇರೆಯವರು ಪೋಸ್ಟ್ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದೇವೆ. ತನಿಖೆ ಮುಗಿದ ಬಳಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸುತ್ತೇವೆ ಎಸ್ಪಿಯವರು ತಿಳಿಸಿದ್ದಾರೆ ಎಂದು ಸಂಸದೆ ಹೇಳಿದರು.

ಬೆಂಗಳೂರು-ಕುಂದಾಪುರ-ವಾಸ್ಕೊ ನಡುವೆ ರೈಲ್ವೆ ಸಚಿವ ಸುರೇಶ್ ಅಂಗಡಿಯವರು ಹೊಸ ರೈಲು ಘೋಷಿಸಿದ್ದು, ಅದರ ಉದ್ಘಾಟನೆ ಕೆಲವು ತೊಡಕುಗಳಾಗಿವೆ. ಆದಷ್ಟು ಬೇಗ ಉದ್ಘಾಟನೆ ಮಾಡಬೇಕು ಎಂದು ರೈಲ್ವೆ ಸಚಿವರಲ್ಲಿ ಈ ಹಿಂದೆ ಮಾತನಾಡಿದ್ದೇನೆ. ಈ ಬಗ್ಗೆ ಇನ್ನೊಮ್ಮೆ ರೈಲ್ವೆ ಸಚಿವರ ಬಳಿ ಮಾತನಾಡಿ ಶೀಘ್ರವೇ ಬೆಂಗಳೂರು-ವಾಸ್ಕೊ ರೈಲಿನ ಉದ್ಘಾಟನೆಯ ದಿನಾಂಕ ತಿಳಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಈ ವೇಳೆಯಲ್ಲಿ ಬಿಜೆಪಿ ಮುಖಂಡರಾದ ಕಿರಣ್ ಕೊಡ್ಗಿ, ಕುತ್ಯಾರು ನವೀನ್ ಶೆಟ್ಟಿ, ಶ್ರೀಲತಾ ಸುರೇಶ್, ಸುರೇಶ್ ಪೂಜಾರಿ, ಸುರೇಶ್ ಶೆಟ್ಟಿ, ಕಾಡೂರು ಸುರೇಶ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಭಾಸ್ಕರ ಬಿಲ್ಲವ, ಗೋಪಾಲ ಕಳಿಂಜೆ, ವಿಜಯ್ ಪೂಜಾರಿ, ಸದಾನಂದ ಬಳ್ಕೂರು, ದಿವಾಕರ ಕಡ್ಗಿ, ವಸಂತಿ ಸಾರಂಗ, ಗುಣರತ್ನಾ, ಪುಷ್ಪ ಶೇಟ್, ಪುರಸಭಾ ಸದಸ್ಯರಾದ ಸಂದೀಪ್ ಖಾರ್ವಿ, ಸಂತೋಷ್, ಮೋಹನ್‍ದಾಸ್ ಶೆಣೈ, ರಾಘವೇಂದ್ರ, ರೈಲ್ವೆ ಹಿತರಕ್ಷಣಾ ವೇದಿಕೆಯ ಗಣೇಶ್ ಪುತ್ರನ್, ವಿವೇಕ್, ಪ್ರವೀಣ್ ಮೊದಲಾದವರು ಇದ್ದರು.

ಕಂಪ್ಲೀಟ್ ಆದ್ಮೇಲೆ ಉದ್ಘಾಟನೆ:
ಪಂಪ್‍ವೆಲ್ ಹಾಗೂ ಶಾಸ್ತ್ರೀ ಸರ್ಕಲ್ ಫ್ಲೈಓವರ್ ವಿಚಾರವಾಗಿ ದ.ಕ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದರು. ಕುಂದಾಪುರ ಫ್ಲೈಓವರ್ ವಿಚಾರದಲ್ಲೂ ಸಂಸದೆ ಶೋಭಾ ಕರಂದ್ಲಾಜೆ ಸಾಕಷ್ಟು ಒಂದಷ್ಟು ಟ್ರೋಲ್ ಪೇಜ್‍ಗಳಿಗೆ ಆಹಾರವಾಗಿದ್ದರು. ಆದರೆ ಶುಕ್ರವಾರ ಫ್ಲೈಓವರ್ ಕಾಮಗಾರಿ ವೀಕ್ಷಣೆಗೆಂದು ಬಂದ ಅವರು ಟ್ರೋಲ್ ಪೇಜ್‍ಗಳಿಗೆ ಆಹಾರವಾಗದಂತೆ ಮಾಧ್ಯಮಗಳಿಗೆ ಆಲೋಚನೆ ಮಾಡಿ ಉತ್ತರಿಸುತ್ತಿರುವುದು ಕಂಡುಬಂದಿತು. ಫ್ಲೈಓವರ್ ಉದ್ಘಾಟನೆ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ಜಾಣ್ಮೆಯಿಂದಲೇ ಉತ್ತರಿಸಿದ ಸಂಸದೆ ಶೋಭಾ, ಫ್ಲೈಓವರ್ ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆ ಎಂದು ಕಾರ್ಯಕರ್ತರ ಬಳಿ ಮುಖ ತಿರುಗಿಸಿ ನಸುನಕ್ಕರು.