ಕುಂದಾಪುರ: ಭಯೋತ್ಪಾದಕರನ್ನು ತಯಾರು ಮಾಡಿ ರಫ್ತು ಮಾಡುವ ಸ್ಥಿತಿ ಪಾಕ್‌ಗೆ ಬಂದಿದೆ. ನಿರಂತರವಾಗಿ ಕಳೆದ ದಶಕಗಳಿಂದ ಸೈನಿಕರಿಗೆ ಕಿರುಕುಳ ಕೊಡುವ ಮೂಲಕ ಈ ದೇಶವನ್ನೇ ಮುಗಿಸಲು ಪ್ರಯತ್ನ ಪಡುತ್ತಲೇ ಬಂದಿದ್ದು, ನಾಲ್ಕುವರೆ ವರ್ಷಗಳಲ್ಲಿ ನರೇಂದ್ರ ಮೋದಿ ಆಡಳಿತದ ಬಳಿಕ ನಮ್ಮ ಸೈನಿಕರಿಗೆ ಕಿರುಕುಳ ಕೊಡುವುದನ್ನು ಕಡಿಮೆ ಮಾಡಿದ್ದಾರೆ. ಆದರೂ ಮೊನ್ನೆ ನಡೆದ ಘಟನೆ ನಮ್ಮೆಲ್ಲರ ಮನಸ್ಸಿಗೂ ನೋವಾಗಿದೆ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.
ಅವರು ಸಿಆರ್‌ಪಿಎಫ್ ಯೋಧರ ಮೇಲಿನ ಭಯೋತ್ಪಾದಕರ ದಾಳಿ ಖಂಡಿಸಿ ತಾಲೂಕು ಪಂಚಾಯತ್ ಮುಂಭಾಗ ಶನಿವಾರ ಸಂಜೆ ಕುಂದಾಪುರ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ ಖಂಡನಾ ಸಭೆಯಲ್ಲಿ ಮಾತನಾಡಿದರು.
ಎರಡುವರೆ ಸಾವಿರ ಸೈನಿಕರನ್ನು ಮುಗಿಸುವ ಕನಸು ಕಂಡ ಪಾಕಿಸ್ತಾನದ ಪಾಪಿಗಳು ನಮ್ಮ ದೇಶದ ವೀರಯೋಧರ ಮೇಲೆ ಆಕ್ರಮಣ ಮಾಡಿದ್ದಾರೆ. ಈ ರೀತಿಯಲ್ಲಿ ಯಾರು ಭಯೋತ್ಪಾದನೆ ಮಾಡುತ್ತಿದ್ದಾರೆ ಅವರು ಮಾತ್ರವಲ್ಲದೆ ಭಯೋತ್ಪಾದನೆ ಮಾಡುವವರಿಗೆ ಸಹಕಾರ ನೀಡುವ ನಮ್ಮೊಳಗಿನ ಹಿತಶತ್ರುಗಳನ್ನು ಹೊರದಬ್ಬಬೇಕಿದೆ ಎಂದರು.
ಸಭೆಯನ್ನುದ್ದೇಶಿಸಿ ಹಿಂಜಾವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪವನ್, ಹಿಂಜಾವೇ ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗಂಗೊಳ್ಳಿ ಮಾತನಾಡಿದರು.
ರಾಜೇಶ್ ಕಾವೇರಿ, ಮಹೇಶ್ ಪೂಜಾರಿ, ಕುಂದಾಪುರ ಹಿಂಜಾವೇ ಮುಖಂಡರಾದ ಸಂಪತ್ ಕುಂದಾಪುರ, ಅನಿಲ್ ಕುಂದಾಪುರ, ಸಾತ್ವಿಕ್, ಸುಶಾನ್ ಮೊದಲಾದವರು ಇದ್ದರು.