ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗಕ್ಕೆ ಕ್ರಮ : ಸಂಸದ ಬಿ.ವೈ ರಾಘವೇಂದ್ರ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದು ಸಾಕಷ್ಟು ವರ್ಷಗಳು ದಾಟಿವೆ. ಯುಪಿಎ ಸರ್ಕಾರ ಅಧಿಕಾರವಧಿಯಲ್ಲಿ ಒಪ್ಪಂದ ಆಗಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಂಡಿದೆ. ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸುತ್ತೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಅವರು ಶನಿವಾರ ಕುಂದಾಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಕಾಂಗ್ರೆಸ್ ಅಪ್ರಚಾರದಿಂದ ಹಿನ್ನೆಡೆ:

ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಯುಪಿಎ ಸರ್ಕಾರದ ಎಲ್ಲಾ ಅಂಗಪಕ್ಷಗಳು ರಾಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಕೇಂದ್ರ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ ಚುನಾವಣೆ ಎದುರಿಸಿದೆ. ಅಪಪ್ರಚಾರ ಮಾಡಿ ಒಂದಷ್ಟು ಲಾಭವನ್ನು ಪಡೆದುಕೊಂಡಿದೆ. ಪಂಚರಾಜ್ಯ ಚುನಾವಣೆಯಲ್ಲಿ ನಮ್ಮ ಪ್ರಚಾರಕ್ಕಿಂತ ಪ್ರತಿಪಕ್ಷಗಳ ಅಪಪ್ರಚಾರ ಜಾಸ್ತಿಯಾಯಿತು. ಹೀಗಾಗಿ ಚುನಾವಣೆಯಲ್ಲಿ ನಮಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿಗೆ ತಲೆಬಾಗಲೇಬೇಕು:

ಕೇಂದ್ರ ಸರ್ಕಾರವು ದೇಶದ ಹಿತದೃಷ್ಠಿಯಿಂದ ಅತ್ಯಾಧುನಿಕ ಯುದ್ದ ವಿಮಾನಗಳನ್ನು ಖರೀದಿಸಿದೆ. ರಾಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಸುಪ್ರೀಂ ಕ್ಲೀನ್ ಚಿಟ್ ನೀಡಿದೆ. ರಾಫೇಲ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಅಧಿಕೃತ ತೀರ್ಪಿಗೆ ನಾವೆಲ್ಲರೂ ತಲೆಬಾಗಬೇಕು ಎಂದವರು ಹೇಳಿದರು.

.