ಕುಂದಾಪುರ:ಶಾಲಾ ಶಿಕ್ಷಕಿಯ ಮೇಲೆ ದೌರ್ಜನ್ಯ ಖಂಡಿಸಿ ಶಿಕ್ಷಕರ ಪ್ರತಿಭಟನೆ

ಕುಂದಾಪುರ: ಬೈಂದೂರು ವಲಯದ ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಕರ್ತವ್ಯ ನಿರತ ಶಿಕ್ಷಕಿಗೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸಿದರು.

ಶನಿವಾರ ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿ ಕಪ್ಪುಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಬಂದ ಶಿಕ್ಷಕರು ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೆ ಮನವಿ ನೀಡಿ ಆರೋಪಿಯನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೈಂದೂರು ವಲಯಾಧ್ಯಕ್ಷ ವಿಶ್ವನಾಥ ಪೂಜಾರಿ ಹಾಗೂ ಕುಂದಾಪುರ ತಾಲೂಕು ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಮಾತನಾಡಿ, ಆರೋಪಿ ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್‌ಚಂದ್ರ ಇಲ್ಲಿನ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುರುವುದಲ್ಲದೇ ಲೈಂಗಿಕ ದೌರ್ಜನ್ಯವೆಸಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಹಿಂದೆ ಈತನೇ ಅದೇ ಶಾಲೆಯ ಮಮತಾ ಎನ್ನುವ ಶಿಕ್ಷಕಿಗೂ ಕಿರುಕುಳ ನೀಡಿದ ಆರೋಪವಿದ್ದು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದನು. ಈತನ ಗೂಂಡಾ ವರ್ತನೆಯಿಂದಾಗಿ ಆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಎಲ್ಲಾ ಶಿಕ್ಷಕರು ಹಿಂದೇಟು ಹಾಕುವಂತಾಗಿದೆ. ಶೀಘ್ರವೇ ಆರೋಪಿಯನ್ನು ಬಂಧಿಸಿ ಆತನಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಷ್ಟೇ ಅಲ್ಲದೇ ನಿರಂತರ ಅಪಾರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.


ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ, ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರುಗಾರ್, ಶಿಕ್ಷಕರ ಸಂಘದ ರಾಜು ಶೆಟ್ಟಿ, ಜಿಲ್ಲೆಯ ನಾನಾ ವಲಯದ ಶಿಕ್ಷಕರ ಸಂಘದ ಅಧ್ಯಕ್ಷರು, ಕುಂದಾಪುರ ತಾಲೂಕು ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಬೈಂದೂರು ತಹಶೀಲ್ದಾರ ಬಸಪ್ಪ ಪೂಜಾರ್ ಅವರ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ಸಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕುಸಿದು ಬಿದ್ದ ಶಿಕ್ಷಕಿ:
ಪ್ರತಿಭಟನೆಯ ವೇಳೆಯಲ್ಲಿ ಪ್ರಭಾರ ಮುಖ್ಯಶಿಕ್ಷಕಿ ಮಲ್ಲಿಕಾ ಶೆಟ್ಟಿ ಅವರು ಅಸ್ವಸ್ಥಗೊಂಡಿದ್ದು, ಮಾನಸಿಕವಾಗಿ ನೊಂದಿರುವ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಬೈಂದೂರು ಆಸ್ಪತ್ರೆಗೆ ದಾಖಲಿಸಲಾಯಿತು. ‘ತಾನು ಶಾಲೆಗೆ ಬಂದ ದಿನದಿಂದಲೂ ಎಸ್.ಡಿ.ಎಂ.ಸಿ ಅಧ್ಯಕ್ಷ ತನ್ನ ಮೇಲೆ ದುರ್ವರ್ತನೆ ತೋರಿದ್ದಾರೆ. ಸರಿಯಾಗಿ ಕರ್ತವ್ಯ ನಿರ್ವಹಿಸಲು ಬಿಡಲಿಲ್ಲ. ನಮ್ಮಂತಹ ಶಿಕ್ಷಕರು ನಿರ್ಭೀತಿಯಿಂದ ಕೆಲಸ ಮಾಡಬೇಕಾದರೆ ಇಂತಹ ವ್ಯಕ್ತಿಗಳ ವಿರುಧ್ಧ ಕಾನೂನು ಕ್ರಮವಾಗಬೇಕು ಎಂದು ನೊಂದ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.

ಸಚಿವರ ರಿಯಾಕ್ಷನ್ ಏನು?
ಈ ದೂರು ನನಗೂ ವಾಟ್ಸಪ್ ಮೂಲಕ ರಾತ್ರಿ ತಲುಪಿತು. ತಕ್ಷಣ ನಾನು ಸಂಬಂಧ ಪಟ್ಟ ಶಿಕ್ಷಕಿಯ ಜೊತೆ ಮಾತನಾಡಿ ವಿವರ ಪಡೆದೆ. ಸಾಂತ್ವನ ಹೇಳಿ ಧೈರ್ಯವನ್ನೂ ತುಂಬಿದ್ದೇನೆ. ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದ್ದೇನೆ. ನಂತರ ಬೈಂದೂರು ಶಾಸಕ ಗೆಳೆಯ ಸುಕುಮಾರ ಶೆಟ್ಟರ ಜೊತೆಯೂ ಚರ್ಚಿಸಿದೆ. ಈ ಅಪರಾಧವೆಸಗಿರುವ Sಆಒಅ ಅಧ್ಯಕ್ಷನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಕುರಿತು ಅವರದೂ ಸಹಮತವಿದೆ.ಇದೀಗ ಉಡುಪಿ ಎಸ್‌ಪಿ ಯವರೊಂದಿಗೆ ಮಾತನಾಡಿ ಆರೋಪಿಯನ್ನು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೇನೆ. ಇಂತಹ ಪ್ರಸಂಗಗಳಲ್ಲಿ ನಮ್ಮಲ್ಲಿ ಝಿರೋ ಟಾಲರೆನ್ಸ್ ಇರಲೇಬೇಕು. ಎಸ್‌ಡಿಎಂಸಿ ಅಧ್ಯಕ್ಷರಿರುವುದು ಶಾಲೆಯ ಅಭಿವೃದ್ಧಿಗಾಗಿ, ಅವನತಿಗಾಗಿ ಅಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ತಮ್ಮ ಅಧೀಕೃತ ಫೇಶ್‌ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.