ಕುಂದಾಪುರ: ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಬುಧವಾರ ಕುಂದಾಪುರದ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆಯ ಬಳಿ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಅಧ್ಯಕ್ಷ ರಾಮ್ ಮೋಹನ್, ಬ್ಯಾಂಕ್‌ಗಳ ವಿಲೀನವನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು. ಬ್ಯಾಂಕ್‌ಗಳ ವಿಲೀನದಿಂದ ಏನನ್ನೂ ಸಾಧಿಸಲಾಗದು ಎನ್ನುವುದು ಈಗಾಗಲೇ ಸಾಬೀತಾದರೂ ಕೂಡ ಸರ್ಕಾರದ ಈ ನಡೆ ಆಶ್ಚರ್ಯ ತಂದಿದೆ ಎಂದರು.
ಬ್ಯಾಂಕ್‌ಗಳ ವಿಲೀನದಿಂದ ಸಿಬ್ಬಂದಿಗಳಿಗೆ ಮಾತ್ರವಲ್ಲದೇ ಗ್ರಾಹಕರಿಗೂ ಕೂಡ ಸಾಕಷ್ಟು ತೊಂದರೆಗಳಾಗಲಿವೆ. ನಿರುದ್ಯೋಗ ಸಮಸ್ಯೆ ಉಲ್ಬಣವಾಗಿರುವ ಈ ದಿನಗಳಲ್ಲಿ ಬ್ಯಾಂಕ್‌ಗಳ ಉದ್ಯೋಗ ನೇಮಕಾತಿ ಸ್ಥಗಿತಗೊಂಡಿದ್ದು ಹಲವರಿಗೆ ಉದ್ಯೋಗ ನಿರಾಕರಿಸಿದಂತಾಗುತ್ತದೆ. ನೆನೆಗುದಿಗೆ ಬಿದ್ದಿರುವ ವೇತನ ಪರಿಷ್ಕರಣೆ ಹಾಗೂ ಎಲ್ಲರಿಗೂ ಸಮಾನ ಪಿಂಚಣಿ ಸಿಗಲೇಬೇಕು ಎಂದರು.
ವಿಜಯ ಬ್ಯಾಂಕ್‌ನ ಅರವಿಂದ ಶೆಟ್ಟಿ, ಕಾರ್ಪೋರೇಶನ್ ಬ್ಯಾಂಕ್‌ನ ಜಯಪ್ರಕಾಶ್ ರಾವ್, ಕರ್ನಾಟಕ ಬ್ಯಾಂಕ್‌ನ ನಿತ್ಯಾನಂದ, ಕೆನರಾ ಬ್ಯಾಂಕ್‌ನ ರಾಕೇಶ್, ಸ್ಟೇಟ್ ಬ್ಯಾಂಕ್‌ನ ಸುಪ್ರಿಯಾ ಮಾತನಾಡಿದರು.
ಉಡುಪಿ ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಹೆರಾಲ್ಡ್ ಡಿಸೋಜ, ರಘುರಾಮಕೃಷ್ಣ ಬಲ್ಲಾಳ್, ನಾಗೇಶ್, ಪ್ರೇಮನಾಥ, ಯು.ಕೆ ಬಿಲ್ಲವ, ವರದರಾಜ್, ಅಧಿಕಾರಿ ಸಂಘಟನೆಯ ಹೇಮಂತ್, ರವಿಶಂಕರ್, ಅಶೋಕ್ ಕೋಟ್ಯಾನ್, ನೌಕರರ ಸಂಘಟನೆಯ ರವೀಂದ್ರ, ರಮೇಶ್ ನಾವಡ, ಸತೀಶ್ ಮಧ್ಯಸ್ಥ ಮೊದಲಾದವರು ಭಾಗವಹಿಸಿದ್ದರು.