ಕುಂದಾಪುರ ಸಾರ್ವತ್ರಿಕ ಮುಷ್ಕರ :೨ನೇ ದಿನ ಬೃಹತ್ ಮೆರವಣಿಗೆ

ಕುಂದಾಪುರ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಾಗಿ ನಡೆದುಕೊಂಡರೆ, ಕಾರ್ಮಿಕ ಕಾನೂನುಗಳನ್ನು ಮುಟ್ಟಲಿಕ್ಕೆ ಬಂದರೆ  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕುದಾದ ಪಾಠವನ್ನು ಕಲಿಸುತ್ತಾರೆ. ಆ ತಾಕತ್ತು, ಆ ಸಾಮರ್ಥ್ಯ ಕಾರ್ಮಿಕ ವರ್ಗಕ್ಕೆ ಇದೆ ಎಂದು ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಹೇಳಿದ್ದಾರೆ.

ರಾಷ್ಟ್ರವ್ಯಾಪಿ ನಡೆಸುತ್ತಿರುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಎರಡನೇ ದಿನವಾದ ಬುಧವಾರ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ರ್‍ಯಾಲಿಯ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸೆಪ್ಟೆಂಬರ್ ೨೮ರಂದು ೧೦ ಕಾರ್ಮಿಕ ಸಂಘಟನೆಗಳು ನವದೆಹಲಿಯಲ್ಲಿ ಸಭೆ ಸೇರಿ ೧೨ ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಬೇಡಿಕೆ ನೀಡಿ ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಕೇಂದ್ರದ ಮೋದಿ ಸರ್ಕಾರ ಇಂದಿಗೂ ಸೌಜನ್ಯಕ್ಕಾದರೂ ಕಾರ್ಮಿಕರ ಸಮಸ್ಯೆಗಳ ಬಗ್ಗೆ  ಕಾರ್ಮಿಕ ಸಂಘಟನೆಗಳನ್ನು ಮಾತುಕತೆಗೆ ಕರೆಯಲಿಲ್ಲ. ಕಾರ್ಮಿಕ ಜಂಟಿ ಸಂಘಟನೆಗಳ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿಯವರಲ್ಲಿ ರಾಜಗಯಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಮುಂದಿಟ್ಟಾಗ ಅವರು ಸಕರಾತ್ಮಕವಾಗಿ ಸ್ಪಂದಿಸಿ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ತಮ್ಮ ವ್ಯಾಪ್ತಿಯೊಳಗೆ ಬರುವ ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತೇನೆಂದು ಹೇಳಿದ್ದಾರೆ ಎಂದರು.

ಪ್ರತಿಭಟನೆಯನ್ನುದ್ದೇಶಿಸಿ ಕಾಂಗ್ರೆಸ್ ನಗರ ಪ್ರಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ. ಜೆಸಿಟಿಯು ನ ಸಂಚಾಲಕ ಎಚ್. ನರಸಿಂಹ ಮಾತನಾಡಿದರು.  ಜೆಸಿಟಿಯು ಸಂಚಾಲಕ ಲಕ್ಷ್ಮಣ ಶೆಟ್ಟಿ, ಇಂಟೆಕ್‌ನ ಚಂದ್ರ ಅಮೀನ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸಿಐಟಿಯುನ ಮುಖಂಡರುಗಳಾದ ವಿ. ನರಸಿಂಹ, ಮಹಾಬಲ ವಡೇರಹೋಬಳಿ, ರಾಜೇಶ್ ವಡೇರಹೋಬಳಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸಿಐಟಿಯು ರಿಕ್ಷಾ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ವಂದಿಸಿದರು. ಸಿಐಟಿಯು ರಿಕ್ಷಾ ಯೂನಿಯನ್‌ನ ಸಂಘಟನಾ ಕಾರ್ಯದರ್ಶಿ ರಮೇಶ ವಡೇರಹೋಬಳಿ ನಿರೂಪಿಸಿದರು.

 

.